ಶಿರಸಿ: ಉಮ್ಮಡಿ–ದಾಸನಕೊಪ್ಪ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸಾ ಮಿಲ್ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಸನಕೊಪ್ಪದ ನಿವಾಸಿ ರವಿ (40) ಅವರು ಜೂನ್ 26ರಂದು ಶಿರಸಿಯ ಸಾ ಮಿಲ್ನಲ್ಲಿ ಕೆಲಸ ಮುಗಿಸಿ ಸಂಜೆ ಸುಮಾರು 5.30ಕ್ಕೆ ತಮ್ಮ ಬೈಕ್ನಲ್ಲಿ ಮನೆಗೆ ಹೊರಟಿದ್ದರು. ಅವರ ಹಿಂದೆ ಸಹೋದರ ಕೃಷ್ಣ ಅವರು ಮತ್ತೊಂದು ಬೈಕ್ನಲ್ಲಿ ಬರುತ್ತಿದ್ದರು.
ಶಿರಸಿ–ಹಾವೇರಿ ಮುಖ್ಯರಸ್ತೆ ಹದಗೆಟ್ಟಿದ್ದ ಕಾರಣ ಇಬ್ಬರೂ ಉಮ್ಮಡಿ ಮಾರ್ಗವಾಗಿ ದಾಸನಕೊಪ್ಪದತ್ತ ತೆರಳುತ್ತಿದ್ದರು. ಸಂಜೆ ಸುಮಾರು 6.40ರ ವೇಳೆಗೆ ಉಮ್ಮಡಿ ಬಸ್ ನಿಲ್ದಾಣದ ಸಮೀಪ ಎದುರಿನಿಂದ ಬಂದ ಬೈಕ್ ಸವಾರ ಮಹೇಶ (24) ಅಜಾಗರೂಕತೆಯಿಂದ ವಾಹನ ಚಲಾಯಿಸಿ, ಏಕಾಏಕಿ ಬಲಭಾಗಕ್ಕೆ ತಿರುಗಿಸಿದ್ದರಿಂದ ರವಿ ಚಲಾಯಿಸುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ರವಿ ರಸ್ತೆಗೆ ಬಿದ್ದು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಅಪಘಾತದ ಬಳಿಕ ಅವರನ್ನು ಮೊದಲು ಶಿರಸಿಯ ಪಿ.ಜಿ. ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಮಹೇಶನಿಗೂ ಹಣೆಯ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.