ಯಲ್ಲಾಪುರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲನೆ ಮಾಡಲು ಮುಂದಾಗಿರುವ ಕ್ರಮವು ಸಾಮಾನ್ಯ ಜನರಿಗೆ ಅನಗತ್ಯ ತೊಂದರೆ ಉಂಟುಮಾಡಲಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಟೀಕಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ, ಅದನ್ನು ಸರ್ಕಾರ ತನ್ನ ಆಡಳಿತ ಯಂತ್ರದ ಮೂಲಕ ಸರಿಪಡಿಸಬೇಕೇ ಹೊರತು, ಮತ್ತೆ ಎಲ್ಲ ಫಲಾನುಭವಿಗಳಿಂದ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿರುವ ದಾಖಲೆಗಳನ್ನು ಸಂಗ್ರಹಿಸುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭದ ಕೆಲಸವಲ್ಲ. ಮೂರು ವರ್ಷಗಳ ಹಿಂದೆ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜನರು ಸರ್ಕಾರಿ ಕಚೇರಿಗಳ ಮುಂದೆ ದಿನಗಟ್ಟಲೆ ಸರದಿಯಲ್ಲಿ ನಿಂತು ಅನುಭವಿಸಿದ ಸಂಕಷ್ಟವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದು ಅವರು ನೆನಪಿಸಿದ್ದಾರೆ.
ಈ ಬಾರಿ ವಾಸ್ತವ್ಯ ಹಾಗೂ ಆದಾಯ ಪ್ರಮಾಣ ಪತ್ರದ ಜೊತೆಗೆ ಜಾತಿ ಪ್ರಮಾಣ ಪತ್ರವನ್ನೂ ಕಡ್ಡಾಯಗೊಳಿಸಿರುವುದು ಜನರಲ್ಲಿ ಅನುಮಾನ ಹುಟ್ಟಿಸಿದೆ. ವಿಳಾಸ ದೃಢೀಕರಣಕ್ಕೆ ಆಧಾರ್, ರೇಷನ್ ಕಾರ್ಡ್ ಜೊತೆಗೆ ಮತದಾರರ ಗುರುತಿನ ಚೀಟಿಯನ್ನೂ ಕಡ್ಡಾಯಗೊಳಿಸಿರುವುದು ಸರ್ಕಾರದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ ಎಂದು ಹೇಳಿದ್ದಾರೆ.
ಒಂದೆಡೆ ಆರ್ಥಿಕ ಸಂಕಷ್ಟದ ಕಾರಣ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ನಿರ್ದಿಷ್ಟ ಜಾತಿ ಸಮುದಾಯಗಳು ಅಥವಾ ರಾಜಕೀಯವಾಗಿ ಅನುಕೂಲಕರ ವರ್ಗಗಳಿಗೆ ಮಾತ್ರ ಸೌಲಭ್ಯ ನೀಡುವ ಉದ್ದೇಶ ಇದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಸರ್ಕಾರದ ಕಾಳಜಿ ಎಲ್ಲ ವರ್ಗದ ಬಡವರ ಮೇಲಿದೆಯೇ ಅಥವಾ ನಿರ್ದಿಷ್ಟ ರಾಜಕೀಯ ಬೆಂಬಲಿಗರ ಮೇಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದೇ ಧೋರಣೆ ಮುಂದುವರಿದರೆ, ಮುಂದೆ ಜಾತಿ-ಧರ್ಮದ ಜೊತೆಗೆ ಯಾವ ಪಕ್ಷದ ಬೆಂಬಲಿಗರು, ಯಾರಿಗೆ ಮತ ಹಾಕಿದ್ದೀರಿ ಎಂಬ ಪ್ರಶ್ನೆಗಳಿಗೂ ಉತ್ತರಿಸುವ ಪರಿಸ್ಥಿತಿ ಬರಬಹುದು ಎಂದು ಅವರು ವ್ಯಂಗ್ಯವಾಡಿದ್ದಾರೆ.