ಸಿದ್ದಾಪುರ: ಉತ್ತರ ಕನ್ನಡ ಸಂಸದ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ಜುಲೈ 12ರಂದು (ಭಾನುವಾರ) ತಾಲೂಕಿನ ಹಾರ್ಸಿಕಟ್ಟಾದಲ್ಲಿ ಬೃಹತ್ ಉಚಿತ ‘ಮೆಗಾ ಆರೋಗ್ಯ ತಪಾಸಣಾ ಶಿಬಿರ’ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಕಾಗೇರಿ ಸಮಸ್ತ ಅಭಿಮಾನಿ ಬಳಗದ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್, ಶಿರಸಿ–ಸಿದ್ದಾಪುರ ಕಾಗೇರಿ ಅಭಿಮಾನಿ ಬಳಗ ಹಾಗೂ ಸಿದ್ದಾಪುರ ಬಿಜೆಪಿ ಮಂಡಲ ಸಹಯೋಗ ನೀಡಲಿವೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಪ್ರತಿನಿಧಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸುಮಾರು ₹142 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.
ಹಾರ್ಸಿಕಟ್ಟಾ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ತಜ್ಞ ವೈದ್ಯಕೀಯ ಸೇವೆಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಮಾಜಮುಖಿ ಶಿಬಿರವನ್ನು ಆಯೋಜಿಸಲಾಗಿದ್ದು, ಗಂಭೀರ ಕಾಯಿಲೆಗಳು ಉಂಟಾಗುವ ಮುನ್ನವೇ ಉಚಿತ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಗಳ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಜನರಲ್ ಮೆಡಿಸಿನ್, ಯೂರಾಲಜಿ, ಸ್ತ್ರೀರೋಗ, ಮಕ್ಕಳ ಆರೋಗ್ಯ, ಚರ್ಮರೋಗ, ನೇತ್ರ ಚಿಕಿತ್ಸೆ ಹಾಗೂ ಕ್ಯಾನ್ಸರ್ ವಿಭಾಗದ ತಜ್ಞರು ರೋಗಿಗಳಿಗೆ ಸಲಹೆ ಹಾಗೂ ತಪಾಸಣೆ ನಡೆಸಲಿದ್ದಾರೆ.
ಇದರ ಜೊತೆಗೆ ಎಂ.ಎಂ. ಜೋಶಿ ಗಣೇಶ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣೆ, ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಶನ್ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ಸೇರಿದಂತೆ ಕ್ಯಾನ್ಸರ್ ಸ್ಕ್ರೀನಿಂಗ್, ಉಚಿತ ಬಿಪಿ ಮತ್ತು ಶುಗರ್ ಪರೀಕ್ಷೆ ನಡೆಸಲಾಗುವುದು. ಅಗತ್ಯವಿರುವ ಕೆಲವು ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಬೆಳಿಗ್ಗೆ 9 ಗಂಟೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, 9.30ರಿಂದ ವೈದ್ಯರ ತಪಾಸಣೆ ಆರಂಭವಾಗುತ್ತದೆ. ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಹೆಗಡೆ, ಶಿವಕುಮಾರ ಕೊಂಡ್ಲಿ ಹಾಗೂ ವಿನಾಯಕ ನಾಯ್ಕ ಉಪಸ್ಥಿತರಿದ್ದರು.