ಶಿರಸಿ: ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ಶಿರಸಿ ನಗರದ ಗಾಂಧಿನಗರದಲ್ಲಿ ಮನೆಯೊಂದರ ಮೇಲೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಗೆ ಅಪಾರ ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು.
ಗಾಂಧಿನಗರದ ಬಿ.ಟಿ. ನಾಯ್ಕ ಬಾಶಿಯವರ ಪುತ್ರ ರಾಮಚಂದ್ರ ನಾಯ್ಕ ಅವರ ಮನೆಯ ಮೇಲೆ ಕಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಮನೆಯ ಹಂಚು, ಗೋಡೆ ಹಾಗೂ ನೀರಿನ ಟ್ಯಾಂಕ್‌ಗೆ ಹಾನಿಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ನಗರ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ್, ಸಂತ್ರಸ್ತರ ಸಮಸ್ಯೆ ಆಲಿಸಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅನಂತಮೂರ್ತಿ ಹೆಗಡೆ, “ರಾಮಚಂದ್ರ ನಾಯ್ಕ ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಕಂಪೌಂಡ್ ಕುಸಿದು ಸಾಕಷ್ಟು ಹಾನಿಯಾಗಿದೆ. ಮತ್ತೆ ಮಳೆ ಬಂದರೆ ಇನ್ನಷ್ಟು ಕುಸಿಯುವ ಆತಂಕವಿದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಸಂತ್ರಸ್ತ ರಾಮಚಂದ್ರ ನಾಯ್ಕ ಮಾತನಾಡಿ, “ರಾತ್ರಿಯ ವೇಳೆ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದ ಪರಿಣಾಮ ಮನೆಗೆ ಭಾರೀ ಹಾನಿಯಾಗಿದೆ. ನಾನು ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈಗ ಸಂಕಷ್ಟ ಎದುರಾಗಿದೆ” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್ ಅವರು ನಗರಸಭೆ ಇಂಜಿನಿಯರ್ ಸುಫಿಯಾನ್ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ವಿವರ ನೀಡಿ, ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿ ಅಗತ್ಯ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
ಬಳಿಕ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತ ರಾಮಚಂದ್ರ ನಾಯ್ಕ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಉಪಸ್ಥಿತರಿದ್ದರು.