ಹೊನ್ನಾವರದಲ್ಲಿ ವ್ಯಾಪಾರಿ ವಿರುದ್ಧ ಪ್ರಕರಣ
ಹೊನ್ನಾವರ: ನಕಲಿ ಅರ್ಜಿ ಹಾಗೂ ನಕಲಿ ಸಹಿ ಬಳಸಿ ಮತ್ತೊಬ್ಬರ ಹೆಸರಿನಲ್ಲಿದ್ದ ವಿದ್ಯುತ್ ಸಂಪರ್ಕವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡ ಆರೋಪದ ಮೇಲೆ ವ್ಯಾಪಾರಿಯೊಬ್ಬನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದಾವರದ ಕೊಲಕಂಡಕೇರಿಯ ನಿವಾಸಿ ಇಸ್ಮಾಯಿಲ್ ಸಿಕಂದರ್ (34) ನೀಡಿದ ದೂರಿನ ಮೇರೆಗೆ, ಹಾಲಿಗದ್ದೆಕೇರಿಯ ನಿವಾಸಿ ಜಮಾಲಸಾಬ್ ಇಬ್ರಾಹಿಂ ಶೇಖ್ (45) ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಇಸ್ಮಾಯಿಲ್ ಅವರ ಹೆಸರಿನಲ್ಲಿದ್ದ ವಿದ್ಯುತ್ ಸಂಪರ್ಕವನ್ನು ಆರೋಪಿಯು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಉದ್ದೇಶದಿಂದ ನಕಲಿ ಅರ್ಜಿ ಸಿದ್ಧಪಡಿಸಿದ್ದಾನೆ.
ಅಲ್ಲದೆ, ಅರ್ಜಿಯಲ್ಲಿ ದೂರುದಾರರ ಸಹಿಯನ್ನೂ ನಕಲಿ ಮಾಡಿ, ಹೊನ್ನಾವರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕಾರ್ಯಪಾಲನಾ ಉಪವಿಭಾಗದ ಕಚೇರಿಗೆ ಸಲ್ಲಿಸಿ ವಿದ್ಯುತ್ ಸಂಪರ್ಕವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮೋಸ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.