ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಾಲು ನಾಯಕ್
ಯಲ್ಲಾಪುರ: ಧನಗರಗೌಳಿ ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಉದ್ಯಮಿ ಬಾಲು ನಾಯಕ್ ಹೇಳಿದರು.
ಪಟ್ಟಣದ ಲಕ್ಷ್ಮೀ ನಾರಾಯಣ ವೆಂಕಟ್ರಮಣ ಮಠದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧನಗರಗೌಳಿ ಸಮಾಜ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜದ ಮಕ್ಕಳು ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ಭಾರತೀಯ ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ರಾಜ್ಯ ಧನಗರಗೌಳಿ ಯುವ ಸೇನೆಯ ಕಾರ್ಯ ಶ್ಲಾಘನೀಯ. ಸಮಾಜದ ಏಳಿಗೆಗಾಗಿ ತಾವು ಸದಾ ಸಹಕಾರ ನೀಡುವುದಾಗಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕೈಜೋಡಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜದ ಮೊದಲ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಭಾಗು ಡೋಯಿಪೊಡೆ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಮತ್ತು ಸಂಸ್ಕಾರ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ದೃಢ ಸಂಕಲ್ಪದೊಂದಿಗೆ ಸಾಗಿದರೆ ಯಶಸ್ಸು ಖಚಿತ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆಯ ರಾಜ್ಯಾಧ್ಯಕ್ಷ ಸಂತೋಷ್ ವರಕ್ ಮಾತನಾಡಿ, ಶಿಕ್ಷಣಕ್ಕೆ ಮಹತ್ವ ನೀಡದ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸಮಾನ ಆದ್ಯತೆ ನೀಡಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಮ್ಮು ಬೀರು ಎಡಗೆ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಠ್ಠು ಶೆಳಕೆ, ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಕೊಂಡು ಭಾವಧಾನೆ, ವೇಣುಗೋಪಾಲ್ ಪಟಕಾರೆ, ಉಪಾಧ್ಯಕ್ಷ ಬಾಬು ಶೇಂಡಗೆ, ಖಜಾಂಚಿ ಲಕ್ಷ್ಮಣ ಕೋಕರೆ, ಸಂಘಟನಾ ಕಾರ್ಯದರ್ಶಿ ಬಮ್ಮು ಫೋಂಡೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ನಯನಾ ಶೇಂಡಗೆ, ನಿವೃತ್ತ ಸೈನಿಕ ಧೂಳು ಶಿಂಧೆ, ಧೂಳು ಡೋಯಿಪೊಡೆ, ಮಾಲು ವರಕ್, ಸಾಮು ಜೋರೆ, ರಾಮು ಬಿಚ್ಚುಕಲೆ, ಜಾನು ಪಾಂಡ್ರಮೀಸೆ ಸೇರಿದಂತೆ ಸಮಾಜದ ಮುಖಂಡರು, ಯುವ ಸೇನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣ ಬೋಡಕೆ ಸ್ವಾಗತಿಸಿದರು. ವನವಾಸಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಭರತ್ ಕೋಕ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಜಾನಕರ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಣ ಕೋಕರೆ ವಂದಿಸಿದರು.