ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅರಣ್ಯ ಇಲಾಖೆ 4.1 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು, ಸುಮಾರು ₹212 ಕೋಟಿ ವೆಚ್ಚ ಮಾಡಿದೆ ಎಂದು ಹೇಳಿಕೊಂಡಿದ್ದರೂ, ನೆಟ್ಟ ಸಸಿಗಳಲ್ಲಿ ಎಷ್ಟು ಬದುಕಿವೆ ಎಂಬುದಕ್ಕೆ ಸ್ಪಷ್ಟ ಮಾಹಿತಿ ನೀಡದಿರುವುದು ಅರಣ್ಯವಾಸಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕೆನರಾ ವೃತ್ತ) ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಇಲಾಖೆ ನೀಡಿರುವ ಉತ್ತರ ಅಪೂರ್ಣ ಹಾಗೂ ವಾಸ್ತವಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 4.1 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ₹212 ಕೋಟಿ ವೆಚ್ಚ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಆದರೆ, ನೆಟ್ಟ ಸಸಿಗಳಲ್ಲಿ ಎಷ್ಟು ಬದುಕಿವೆ ಎಂಬ ಮಾಹಿತಿಯನ್ನು ಕೇಳಿದಾಗ, “ಕೇಂದ್ರ ಕಚೇರಿಯಿಂದ ಪರಿಶೀಲನೆ ಬಳಿಕ ಮಾಹಿತಿ ನೀಡಲಾಗುವುದು” ಎಂಬ ಉತ್ತರ ನೀಡಲಾಗಿದೆ. ಇದರಿಂದ ಇಲಾಖೆಯ ಕಾರ್ಯವೈಖರಿಯ ಮೇಲೆಯೇ ಪ್ರಶ್ನೆಗಳು ಮೂಡಿವೆ ಎಂದು ರವೀಂದ್ರ ನಾಯ್ಕ ಟೀಕಿಸಿದ್ದಾರೆ.
ವನ್ಯಜೀವಿ ನಿರ್ವಹಣಾ ಯೋಜನೆ ಹಾಗೂ ಅಭಯಾರಣ್ಯ ಪ್ರದೇಶಗಳಲ್ಲಿ ನೆಡುತೋಪು, ತಂತಿ ಬೇಲಿ, ಇಂಗುಗುಂಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆದ ದಾಖಲೆಗಳನ್ನು ಕೇಳಿದಾಗ, “ಅನುಮೋದನೆ ಕರಡು ಹಂತದಲ್ಲಿದ್ದು, ಅಂತಿಮ ಅನುಮೋದನೆ ಆಗಿಲ್ಲ” ಎಂದು ಇಲಾಖೆ ಉತ್ತರಿಸಿದೆ. ಇದರಿಂದ ಅಗತ್ಯ ಅನುಮೋದನೆ ಇಲ್ಲದೇ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನೊಂದೆಡೆ, ಇಲಾಖೆಯ ಮಾಹಿತಿಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 8.28 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಇದ್ದು, 2022ರಿಂದ 2027ರವರೆಗೆ 11,041 ಹೆಕ್ಟೇರ್ ಪ್ರದೇಶದಲ್ಲಿ 58,832 ನೆಡುತೋಪುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಒಟ್ಟು ಅರಣ್ಯ ಪ್ರದೇಶದ ಕೇವಲ ಶೇ.7.10ರಷ್ಟು ಮಾತ್ರ ಎಂದು ಅವರು ಹೇಳಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ಕೋಟ್ಯಂತರ ಸಸಿಗಳನ್ನು ನೆಟ್ಟಿದ್ದೇವೆ ಎನ್ನಲಾಗುತ್ತಿದೆ. ಆದರೆ ನೆಟ್ಟ ಸಸಿಗಳು ಎಲ್ಲಿವೆ? ಎಷ್ಟು ಉಳಿದಿವೆ? ಸಾರ್ವಜನಿಕ ಹಣ ಎಷ್ಟು ಪರಿಣಾಮಕಾರಿಯಾಗಿ ಬಳಸಲಾಗಿದೆ? ಎಂಬ ಪ್ರಶ್ನೆಗಳಿಗೆ ಇಲಾಖೆ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.