ಶಿರಸಿ: ಶಿರಸಿಯ ಕ್ವಾಲಿಟಿ ವೈನ್ ಶಾಪ್‌ನಲ್ಲಿ ಮದ್ಯ ಖರೀದಿಸಲು ಬಂದಿದ್ದ ವ್ಯಕ್ತಿಗೆ ಕ್ವಾಟರ್ ಜೊತೆಗೆ ʻದೊಣ್ಣೆ ಡೋಸ್ʼ ಸಿಕ್ಕಿದೆ ಎಂಬ ಆರೋಪದಡಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಗತ್ ಸಿಂಗ್ ನಗರದ ನಿವಾಸಿ ಶ್ರೀನಿವಾಸ ಆಚಾರಿ ನೀಡಿದ ದೂರಿನ ಪ್ರಕಾರ, ಅವರು ದಿನನಿತ್ಯ ಕರಿಗುಂಡಿ ರಸ್ತೆಯ ಕ್ವಾಲಿಟಿ ವೈನ್ ಶಾಪ್‌ಗೆ ಮದ್ಯ ಸೇವನೆಗಾಗಿ ಹೋಗುತ್ತಿದ್ದರು. ಅಲ್ಲಿನ ಮ್ಯಾನೇಜರ್ ಸಂಕೇತ್ ಪೂಜಾರಿ ಪ್ರತಿದಿನವೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನೆಂದು ಆರೋಪಿಸಿದ್ದಾರೆ.
ಜುಲೈ 13ರಂದು ರಾತ್ರಿ ಸುಮಾರು 7.30ಕ್ಕೆ ಎಂದಿನಂತೆ ವೈನ್ ಶಾಪ್‌ಗೆ ತೆರಳಿ ಒಂದು ಕ್ವಾಟರ್ ಮದ್ಯ ಖರೀದಿಸಿ, ಅದರ ಅರ್ಧವನ್ನು ಸೇವಿಸಿ ಹೊರಗೆ ಬಂದು ಮತ್ತೊಬ್ಬರೊಂದಿಗೆ ಮಾತನಾಡುತ್ತ ನಿಂತಿದ್ದ ವೇಳೆ, ಕೌಂಟರ್ ಒಳಗಿದ್ದ ಸಂಕೇತ್ ಪೂಜಾರಿ ಅವಾಚ್ಯವಾಗಿ ಬೈದು, ಕಟ್ಟಿಗೆ ದೊಣ್ಣೆಯಿಂದ ಬಲ ಭುಜಕ್ಕೆ ಹೊಡೆದು ಗಾಯಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನಗೇಕೆ ಹೊಡೆಯುತ್ತೀಯಾ ಎಂದು ಪ್ರಶ್ನಿಸಿದಾಗ ಮತ್ತೆ ಅವಾಚ್ಯವಾಗಿ ನಿಂದಿಸಿ, ಮತ್ತೊಂದೆರಡು ಏಟು ಬಡಿದು, ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.