Friday, July 24, 2026
Join WhatsApp Group
HomeLocal Newsಟಿಎಂಎಸ್‌ಗೆ ಆಡಳಿತ ಮಂಡಳಿ ರಚನೆ; ರೈತರ ಆತಂಕಕ್ಕೆ ತೆರೆ

ಟಿಎಂಎಸ್‌ಗೆ ಆಡಳಿತ ಮಂಡಳಿ ರಚನೆ; ರೈತರ ಆತಂಕಕ್ಕೆ ತೆರೆ

ಅಧ್ಯಕ್ಷರಾಗಿ ಎನ್.ಕೆ. ಭಟ್ಟ, ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಅವಿರೋಧ ಆಯ್ಕೆ

ಯಲ್ಲಾಪುರ: ಸುಮಾರು ಒಂಬತ್ತು ತಿಂಗಳ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ತಾಲೂಕಿನ ಪ್ರತಿಷ್ಠಿತ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿ.ಎಂ.ಎಸ್.)ಕ್ಕೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ಅಧ್ಯಕ್ಷರಾಗಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಂಘದ ಆಡಳಿತಕ್ಕೆ ಹೊಸ ಚೈತನ್ಯ ಸಿಕ್ಕಿದ್ದು, ರೈತರಲ್ಲಿದ್ದ ಆತಂಕವೂ ದೂರವಾಗಿದೆ.

ಸಂಘದ ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಕಳೆದ ವರ್ಷ ಸೆಪ್ಟೆಂಬರ್‌ 18ರಂದು ಮತದಾನ ನಡೆದ ಬಳಿಕ ಮತಪೆಟ್ಟಿಗೆಗಳನ್ನು ಉಪಖಜಾನೆಯಲ್ಲಿ ಭದ್ರವಾಗಿ ಇರಿಸಲಾಗಿತ್ತು. ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಜುಲೈ 6ರಂದು ಮತ ಎಣಿಕೆ ನಡೆದಿದ್ದು, ಎನ್.ಕೆ. ಭಟ್ಟ ನೇತೃತ್ವದ ತಂಡ 14 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಜಯಗಳಿಸಿ ಆಡಳಿತದ ಮೇಲೆ ಹಿಡಿತ ಸಾಧಿಸಿತ್ತು.

 ಮಂಗಳವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎರಡೂ ಹುದ್ದೆಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಾಯಕ ನಿಬಂಧಕ ಬಿ.ಡಿ. ಡಿಸೋಜಾ ಅವರು ಇಬ್ಬರನ್ನೂ ಅವಿರೋಧವಾಗಿ ಆಯ್ಕೆಯಾದವರೆಂದು ಘೋಷಿಸಿದರು.

ಆಯ್ಕೆಯ ಬಳಿಕ ಮಾತನಾಡಿದ ಅಧ್ಯಕ್ಷ ಎನ್.ಕೆ. ಭಟ್ಟ, ಸಂಘದ ಸದಸ್ಯರು ಮತ್ತು ನಿರ್ದೇಶಕರು ತಮ್ಮ ಮೇಲೆ ವ್ಯಕ್ತಪಡಿಸಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ರೈತರ ಹಿತಾಸಕ್ತಿಗೆ ಆದ್ಯತೆ ನೀಡಲಾಗುವುದು. ಕೃಷಿ ಸಾಲದ ಮೇಲಿನ ಬಡ್ಡಿದರ ಕಡಿತ ಸೇರಿದಂತೆ ರೈತರಿಗೆ ಅನುಕೂಲವಾಗುವ ಯೋಜನೆಗಳಿಗಾಗಿ ಪ್ರಯತ್ನಿಸಲಾಗುವುದು.

ರೈತರು ಮತ್ತು ವ್ಯಾಪಾರಸ್ಥರ ನಡುವೆ ಉತ್ತಮ ಹೊಂದಾಣಿಕೆ ಬೆಳೆಸುವ ಮೂಲಕ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವ ವಾತಾವರಣ ನಿರ್ಮಿಸಲು ಸಂಘ ಬದ್ಧವಾಗಿದೆ ಎಂದರು. ಇದೇ ವೇಳೆ ಜುಲೈ 18ರಂದು ರೈತರ ಅಭಿನಂದನಾ ಸಮಾರಂಭ ಆಯೋಜಿಸಿರುವುದಾಗಿ ತಿಳಿಸಿದರು.

ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ಆಡಳಿತ ಸಮಿತಿ ಇಲ್ಲದಿದ್ದ ಪರಿಣಾಮ ಕಳೆದ ಒಂಬತ್ತು ತಿಂಗಳಲ್ಲಿ ಸುಮಾರು 13 ಸಾವಿರ ಕ್ವಿಂಟಾಲ್ ಅಡಿಕೆ ಸಂಘದ ಹೊರಗೆ ಮಾರಾಟವಾಗಿರುವುದು ಬೇಸರದ ಸಂಗತಿ. ಆ ರೈತರನ್ನು ಮತ್ತೆ ಸಂಘದ ವ್ಯಾಪ್ತಿಗೆ ಕರೆತಂದು ಟಿಎಂಎಸ್‌ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದರು.

 ಸಂಘದ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ 10 ಗುಂಟೆ ಜಾಗ ಖರೀದಿಸಿದ್ದು, ಅಲ್ಲಿ ಗೋದಾಮು ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ನೂತನ ಪದಾಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share