Friday, July 24, 2026
Join WhatsApp Group
HomeLocal Newsಅರಣ್ಯ-ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿ

ಅರಣ್ಯ-ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿ

ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ಸತೀಶ್ ಸೈಲ್ ಸೂಚನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಮಾದಕ ವಸ್ತುಗಳ ಸರಬರಾಜು ತಡೆಯಲು ಅರಣ್ಯ ಪ್ರದೇಶಗಳು ಹಾಗೂ ಗಡಿ ಭಾಗಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕ್ರಿಮ್ಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆಪರೇಷನ್ ರೈಸ್’ ಮಾದಕ ವ್ಯಸನಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನತೆ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ನಿರ್ಮೂಲನೆಗೆ ವೈದ್ಯರು, ಪೊಲೀಸ್ ಇಲಾಖೆ, ಮಾಧ್ಯಮಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದು, ಸಮಾಜವನ್ನು ಈ ಪಿಡುಗಿನಿಂದ ಮುಕ್ತಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ಅವರು ಕರೆ ನೀಡಿದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಸಮನ್ವಯಿತ ಕಾರ್ಯಾಚರಣೆ ನಡೆಯುತ್ತಿದ್ದು, ವಿವಿಧ ಇಲಾಖೆಗಳನ್ನೊಳಗೊಂಡ ವಿಶೇಷ ಸಮಿತಿ ರಚಿಸಲಾಗಿದೆ. ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರು ಕೆಎಸ್‌ಪಿ ಆ್ಯಪ್ ಮೂಲಕ ಡ್ರಗ್ಸ್ ಸಂಬಂಧ ಮಾಹಿತಿ ನೀಡಬಹುದಾಗಿದ್ದು, ಮಾಹಿತಿ ನೀಡಿದವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು. ಕ್ರಿಮ್ಸ್ ಕ್ಯಾಂಪಸ್ ಅನ್ನು ‘ಡ್ರಗ್ಸ್ ಫ್ರೀ ಕ್ಯಾಂಪಸ್’ ಆಗಿ ರೂಪಿಸುವ ಗುರಿಯನ್ನೂ ಪ್ರಕಟಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಡ್ರಗ್ಸ್ ವ್ಯಸನದ ಪರಿಣಾಮ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಇಡೀ ಕುಟುಂಬ ಮತ್ತು ಸಮಾಜಕ್ಕೆ ತಟ್ಟುತ್ತದೆ. “ನೋ ಡ್ರಗ್ಸ್ ಎನ್ನುವವನೇ ನಿಜವಾದ ಹೀರೋ” ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 496 ಪ್ರಕರಣಗಳಲ್ಲಿ 589 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

75 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ನಿರಂತರ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯ 129 ಕಾಲೇಜುಗಳಲ್ಲಿ ಆಂಟಿ ಡ್ರಗ್ ಸಮಿತಿಗಳನ್ನು ರಚಿಸಲಾಗಿದ್ದು, 1,879 ಜಾಗೃತಿ ಕಾರ್ಯಕ್ರಮಗಳ ಮೂಲಕ 67 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ರಿಮ್ಸ್ ಡೀನ್ ಡಾ. ಪೂರ್ಣಿಮಾ, ಕಾರವಾರ ಡಿಎಫ್‌ಒ ಆಂಥೋಣಿ ಮರಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಜಯ್ ದೊಡ್ಡಮನಿ ಸೇರಿದಂತೆ ವಿವಿಧ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಾದಕ ವಸ್ತುಗಳ ಬಳಕೆ ವಿರುದ್ಧ ಪ್ರತಿಜ್ಞಾ ವಿಧಿಯನ್ನೂ ಸ್ವೀಕರಿಸಲಾಯಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share