ಮೊದಲ 7 ದಿನ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆಗೆ ಚಿಂತನೆ; ಸಚಿವ ಯು.ಟಿ. ಖಾದರ್
ಕುಮಟಾ: ಕರ್ನಾಟಕದಲ್ಲಿ ಅಪಘಾತಕ್ಕೆ ಒಳಗಾಗುವ ಯಾವುದೇ ವ್ಯಕ್ತಿಗೆ ಅವರು ರಾಜ್ಯದವರೇ ಆಗಿರಲಿ, ಬೇರೆ ರಾಜ್ಯ ಅಥವಾ ವಿದೇಶದವರೇ ಆಗಿರಲಿ ಆಸ್ಪತ್ರೆಗೆ ದಾಖಲಾದ ಮೊದಲ 7 ದಿನಗಳವರೆಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಲಾದ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೆ ಚಿಕಿತ್ಸಾ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬ ಆತಂಕದಿಂದ ಸಾರ್ವಜನಿಕರು ಕೆಲವೊಮ್ಮೆ ನೆರವಿಗೆ ಮುಂದಾಗುವುದಿಲ್ಲ. ಈ ಗೊಂದಲ ನಿವಾರಿಸಿ, ಗಾಯಾಳುವಿಗೆ ತಕ್ಷಣ ಚಿಕಿತ್ಸೆ ದೊರಕುವಂತೆ ಮಾಡಲು ಮುಖ್ಯಮಂತ್ರಿ ಅವರೊಂದಿಗೆ ಈ ಯೋಜನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ, ರಾಜ್ಯದಲ್ಲಿ ಅಪಘಾತ ಅಥವಾ ತುರ್ತು ಕರೆ ಬಂದ ಬಳಿಕ 15 ನಿಮಿಷಗಳೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದ ಅವರು, ನಿಗದಿತ ಸಮಯಕ್ಕೆ ಆಂಬುಲೆನ್ಸ್ ತಲುಪದಿದ್ದರೆ ಸಂಬಂಧಿತ ನಿರ್ವಹಣಾ ಸಂಸ್ಥೆಗೆ ₹3,000ರಿಂದ ₹5,000ವರೆಗೆ ದಂಡ ವಿಧಿಸುವ ಕಾನೂನು ತರಲು ಸರ್ಕಾರ ಮುಂದಾಗಿದೆ ಎಂದರು.
ಶಾಲಾ ಮಕ್ಕಳ ಆರೋಗ್ಯ ಕಾಪಾಡಲು ಜಂಕ್ ಫುಡ್ ನಿಯಂತ್ರಣಕ್ಕಾಗಿ ಫುಡ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗುವುದು. ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಹೈಟೆಕ್ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಕಲಬೆರಕೆ ಹಾಗೂ ಕಳಪೆ ಆಹಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರು, ನರ್ಸ್, ಫಾರ್ಮಾಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್‌ಗಳ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಗುತ್ತಿಗೆ ಹಾಗೂ ಖಾಯಂ ಆಧಾರದ ಮೇಲೆ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಕುಮಟಾದಲ್ಲಿ ಆರಂಭವಾಗಿರುವ ಟ್ರಾಮಾ ಕೇರ್ ಸೆಂಟರ್ ರಾಜ್ಯದ ಆರೋಗ್ಯ ಇಲಾಖೆಯ 3ನೇ ಟ್ರಾಮಾ ಕೇರ್ ಕೇಂದ್ರವಾಗಿದ್ದು, ಅಗತ್ಯ ಹೆಚ್ಚುವರಿ ಉಪಕರಣಗಳು ಹಾಗೂ ಮೂಲಸೌಕರ್ಯಕ್ಕೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಹೆದ್ದಾರಿ ಸಮೀಪ ಇರುವ ಕುಮಟಾ ಆಸ್ಪತ್ರೆಯಲ್ಲಿ ಶವಾಗಾರಕ್ಕೆ ಬರುವ ಕುಟುಂಬಸ್ಥರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ, ಫ್ಯಾನ್, ಬೆಳಕು, ಪೊಲೀಸ್ ಪಂಚನಾಮೆ ಕೊಠಡಿ, ವೈದ್ಯರ ಕೊಠಡಿ ಹಾಗೂ ಫ್ರೀಜರ್ ಒಳಗೊಂಡ ಆಧುನಿಕ ಮಾರ್ಚುರಿ ಕಟ್ಟಡ ನಿರ್ಮಿಸುವಂತೆ ಬಿಇಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಸಚಿವನಾಗಿ ಹೆಚ್ಚು ಆಸ್ಪತ್ರೆಗಳನ್ನು ಕಟ್ಟುವುದು ಮಾತ್ರ ನನ್ನ ಗುರಿಯಲ್ಲ; ಜನರಿಗೆ ಆಸ್ಪತ್ರೆಯ ಅಗತ್ಯವೇ ಬರದಂತಹ ಆರೋಗ್ಯಕರ ವಾತಾವರಣ ನಿರ್ಮಿಸುವುದೇ ನನ್ನ ಉದ್ದೇಶ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಬಿಇಎಲ್ ಸಂಸ್ಥೆಯು ರೂ. 2.73 ಕೋಟಿ ಅನುದಾನ ನೀಡುವ ಮೂಲಕ ಈ ಯೋಜನೆಗೆ ಬಲ ನೀಡಿದೆ. ಸ್ಥಳೀಯ ರೋಟರಿ ಕ್ಲಬ್ ಈ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು ರೂ. 1.70 ಕೋಟಿಗೂ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಸ್ಥಳೀಯರು ಮತ್ತು ಸಂಘ ಸಂಸ್ಥೆಗಳು ಕೂಡಾ ಈ ಆಸ್ಪತ್ರೆಗೆ ನೆರವು ನೀಡಿದ್ದು, ಈ ಆಸ್ಪತ್ರೆಯನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲು ಸಚಿವರನ್ನು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಡಿಎಚ್‌ಒ ಡಾ. ಸಂಜಯ್ ದೊಡ್ಡಮನಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.