Friday, July 24, 2026
Join WhatsApp Group
HomeCrime24 ಗಂಟೆಯಲ್ಲೇ ಆಟ ನಿಲ್ಲಿಸಿದ ಚೈನ್‌ ಕಳ್ಳ!

24 ಗಂಟೆಯಲ್ಲೇ ಆಟ ನಿಲ್ಲಿಸಿದ ಚೈನ್‌ ಕಳ್ಳ!

ಖಾಕಿಯ ಕ್ಷಿಪ್ರ ಕಾರ್ಯಾಚರಣೆಗೆ ಶಹಬ್ಬಾಸ್

ಮುರುಡೇಶ್ವರ: ʻಬಲಸೆ ಭಟ್ರ ಮನೆ ಎಲ್ಲಿ ಬರುತ್ತದೆ?ʼ ಎಂದು ದಾರಿ ಕೇಳುವ ನೆಪದಲ್ಲಿ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುರ್ಡೇಶ್ವರ ಪೊಲೀಸರು ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಚಿನ್ನದ ಸರ ಸೇರಿ ಕೃತ್ಯಕ್ಕೆ ಬಳಸಿದ್ದ ಬೈಕ್‌ ಮತ್ತು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಜುಲೈ 20ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ದೊಡ್ಡ ಬಲಸೆ ಕ್ರಾಸ್ ಬಳಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಇಬ್ಬರು ಅಪರಿಚಿತರು ತಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 22 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಲಭ್ಯ ಮಾಹಿತಿ ಆಧರಿಸಿ ಹಲ್ಲಂದಿ-ಕಟಗಾರಕೊಪ್ಪ ನಿವಾಸಿ, ಭಟ್ಕಳದ ಶೋರೂಮ್‌ ಒಂದರಲ್ಲಿ ಕೆಲಸಗಾರನಾಗಿರುವ ನಾಗರಾಜ ಗಣಪತಿ ಗೊಂಡ (29) ಎಂಬಾತನನ್ನು ಪ್ರಕರಣ ದಾಖಲಾಗಿದ 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತನಿಂದ ಸುಲಿಗೆ ಮಾಡಿದ್ದ 22 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಮೋಟಾರ್‌ಸೈಕಲ್ ಸೇರಿದಂತೆ ಒಟ್ಟು ಸುಮಾರು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ, ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ನೇತೃತ್ವದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸುಬ್ರಹ್ಮಣ್ಯ ನಾಯ್ಕ, ಅರುಣ್ ಪಿಂಟೋ, ಮಂಜುನಾಥ ಲಕ್ಷಾಪುರ, ಬಿಲಾಲ್ ಅಹ್ಮದ್ ಸಿದ್ದಾಪೂರ, ವಿಜಯ ನಾಯ್ಕ, ಮಹೇಶ್ ಸಮನಳ್ಳಿ, ಸಿದ್ದಪ್ಪ ಕಾಂಬಳೆ ಹಾಗೂ ಸದಾಶಿವ ಕಟ್ಟಿಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚೈನ್ ಕಿತ್ತು ಓಡೋದು ಸುಲಭ… ಖಾಕಿಯ ಕಣ್ಣಿಂದ ತಪ್ಪಿಸಿಕೊಳ್ಳೋದು ಅಷ್ಟು ಸುಲಭವಲ್ಲ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share