ಶಿರಸಿ: ಬೆಂಗಳೂರಿನಲ್ಲಿ ಒಳ್ಳೆಯ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಕನಸು. ಅದೇ ವೇಳೆ ಎದುರಾದ ಸ್ನೇಹಿತ, ʻನನಗೆ ಟ್ರೇಡಿಂಗ್ ಕಂಪನಿಯ ಮಾಲೀಕರ ಪರಿಚಯ ಇದೆ. ನಿನಗೆ ಕೆಲಸ ಕೊಡಿಸುತ್ತೇನೆʼ ಎಂದು ಭರವಸೆ ಕೊಟ್ಟ. ಸ್ನೇಹಿತನ ಮಾತನ್ನು ನಂಬಿದ ಯುವಕ, ಬರೋಬ್ಬರಿ ₹3 ಲಕ್ಷವನ್ನು ಹಂತ ಹಂತವಾಗಿ ಫೋನ್‌ಪೇ ಮೂಲಕ ವರ್ಗಾಯಿಸಿದ. ಆದರೆ ಮೂರು ತಿಂಗಳು ಕಾದರೂ ಕೆಲಸ ಸಿಗಲಿಲ್ಲ. ಹಣವೂ ವಾಪಸ್ ಬರಲಿಲ್ಲ. ಈಗ ಆ ಕನಸಿನ ಉದ್ಯೋಗವೇ ಪೊಲೀಸ್ ಠಾಣೆಯ ಮೆಟ್ಟಿಲೇರಿಸಿದೆ!
ಶಿರಸಿ ತಾಲೂಕಿನ ಬೊಪ್ಪನಳ್ಳಿಯ ಗೌರೀಶ ಪ್ರಭಾಕರ ನಾಯ್ಕ (25) ಅವರು ನೀಡಿದ ದೂರಿನ ಮೇರೆಗೆ, ಕಾನಕೊಪ್ಪದ ವಿವೇಕ ಕೃಷ್ಣ ದೇವಾಡಿಗ (26) ಹಾಗೂ ಅವರ ತಂದೆ ಕೃಷ್ಣ ದೇವಾಡಿಗ (50) ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರೀಶ ಮತ್ತು ವಿವೇಕ ಸ್ನೇಹಿತರಾಗಿದ್ದರು. 2025ರ ಜುಲೈ ತಿಂಗಳಲ್ಲಿ, ʻಉತ್ತಮ ಟ್ರೇಡಿಂಗ್ ಕಂಪನಿಯ ಮಾಲೀಕರು ಪರಿಚಯವಿದ್ದಾರೆ. ನಿನಗೆ ಖಂಡಿತ ಕೆಲಸ ಕೊಡಿಸುತ್ತೇವೆʼ ಎಂದು ವಿವೇಕ ಹಾಗೂ ಅವರ ತಂದೆ ನಂಬಿಸಿದ್ದರೆಂದು ಆರೋಪಿಸಲಾಗಿದೆ.
ಈ ಮಾತು ನಂಬಿದ ಗೌರೀಶ ಅವರು ಹಂತ ಹಂತವಾಗಿ ಒಟ್ಟು ₹3 ಲಕ್ಷವನ್ನು ವಿವೇಕನ ಫೋನ್‌ಪೇ ಖಾತೆಗೆ ಕಳುಹಿಸಿದ್ದಾರೆ. ಮೂರು ತಿಂಗಳೊಳಗೆ ಕೆಲಸ ಕೊಡಿಸುವುದಾಗಿ ಹೇಳಿದ್ದರೂ ಉದ್ಯೋಗ ಸಿಗಲಿಲ್ಲ. ಹಣವನ್ನು ವಾಪಸ್ ಕೇಳಿದಾಗಲೂ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಇದೀಗ ಗೌರೀಶ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ.
ಉದ್ಯೋಗದ ಆಸೆ ಒಳ್ಳೆಯದೇ… ಆದರೆ ʻಕೆಲಸ ಕೊಡಿಸ್ತೀನಿʼ ಎನ್ನುವವರ ಜೇಬಿಗೆ ಹಣ ಹಾಕುವ ಮುನ್ನ ಹತ್ತು ಬಾರಿ ಯೋಚಿಸಿ!