ಕಾರವಾರ: ಉತ್ತಮ ಶಿಕ್ಷಣವೇ ನಮ್ಮ ಉಜ್ವಲ ಭವಿಷ್ಯದ ಭದ್ರ ಬುನಾದಿ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ಶಿಕ್ಷಕರನ್ನು ಗೌರವಿಸಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿ ನಾಗರಿಕರಾಗಬೇಕು” ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದರು.
ಗುರು ಪೂರ್ಣಿಮೆಯ ಅಂಗವಾಗಿ ಕಾರವಾರದ ಶಾಸಕರ ಕನ್ನಡ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯ ವಿವಿಧ ಕೊಠಡಿಗಳು ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಬಳಿಕ ಶಿಕ್ಷಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಕನಸುಗಳು ಹಾಗೂ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಗುರು ಪೂರ್ಣಿಮೆಯ ಶುಭಾಶಯ ಕೋರಿದ ರೂಪಾಲಿ ನಾಯ್ಕ, ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.
ತಮ್ಮ ಶಾಸಕತ್ವದ ಅವಧಿಯನ್ನು ಸ್ಮರಿಸಿದ ಅವರು, ನನ್ನ ಶಾಸಕತ್ವದ ಅವಧಿಯಲ್ಲಿ ಈ ಶಾಲೆಯ ಅಭಿವೃದ್ಧಿಗಾಗಿ ₹5 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಇಂದು ಶಾಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ನೋಡಿ ಆ ಅನುದಾನ ಸಾರ್ಥಕವಾಗಿರುವುದು ಸಂತೋಷ ತಂದಿದೆ. ಇನ್ನೂ ಕೆಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿದ್ದು, ಮುಂದಿನ ದಿನಗಳಲ್ಲಿ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.