ಯಲ್ಲಾಪುರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲು ಸಂಗ್ರಹಿಸಲು, ಯೋಜನಾ ವ್ಯಾಪ್ತಿಯಲ್ಲೇ ಸುಮಾರು 500 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿ ಕಲ್ಲು ಕ್ವಾರಿ ನಡೆಸಲು ಖಾಸಗಿ ಗುತ್ತಿಗೆ ಸಂಸ್ಥೆಗೆ ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿಗೆ ನಾಗರಿಕ ವೇದಿಕೆ ಯಲ್ಲಾಪುರ ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿಕೆ ನೀಡಿದ್ದು, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕೈಗಾದಿಂದ ಕೇವಲ 25 ಕಿ.ಮೀ. ದೂರದಲ್ಲಿನ ತಳಕೇಬೈಲ ಗಣಿಗಾರಿಕೆಯನ್ನು ಪರಿಸರ ನಾಶದ ಕಾರಣದಿಂದ ಮುಚ್ಚಲಾಗಿದೆ. 55 ಕಿ.ಮೀ. ದೂರದ ಬಿಸಗೋಡ ಗಣಿಗಾರಿಕೆಯನ್ನೂ ಇದೇ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, 40 ಕಿ.ಮೀ. ದೂರದ ಕಳಚೆ ಗ್ರಾಮದಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿದ್ದು, ಬಂಡೆಗಲ್ಲುಗಳು ರಸ್ತೆಗೆ ಜಾರುತ್ತಿರುವ ಘಟನೆಗಳು ನಡೆಯುತ್ತಿವೆ.
ಇಂತಹ ಪರಿಸ್ಥಿತಿಯ ನಡುವೆಯೇ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಹಾಗೂ ಅದೇ ಯೋಜನಾ ವ್ಯಾಪ್ತಿಯೊಳಗೆ 500 ಎಕರೆ ಪ್ರದೇಶದಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
ಕೈಗಾ ಅಣು ಸ್ಥಾವರದ ವ್ಯಾಪ್ತಿಯಲ್ಲೇ ಬೃಹತ್ ಪ್ರಮಾಣದಲ್ಲಿ ಭೂಮಿಯನ್ನು ಅಗೆದರೆ ಈಗಿರುವ ಅಣು ಸ್ಥಾವರಗಳ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗುವುದಿಲ್ಲವೇ? ಏನಾದರೂ ಅನಾಹುತ ಸಂಭವಿಸಿದರೆ ಅದರ ಪರಿಣಾಮ ಇಡೀ ಜಿಲ್ಲೆಯ ಮೇಲೆ ಬೀಳುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದುವೇಳೆ ಯಾವುದೇ ಅನಾಹುತವಾಗದಿದ್ದರೂ, 500 ಎಕರೆ ದಟ್ಟ ಅರಣ್ಯದಲ್ಲಿರುವ ಮರಗಳು, ವನ್ಯಜೀವಿಗಳು ಹಾಗೂ ಜೀವ ವೈವಿಧ್ಯದ ಭವಿಷ್ಯ ಏನಾಗಲಿದೆ? ಎಂದು ರಾಮು ನಾಯ್ಕ ಪ್ರಶ್ನಿಸಿದ್ದಾರೆ.
ಸುಮಾರು ₹21 ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ ಅಗತ್ಯವಿರುವ ಕ್ರಷರ್ ಕಲ್ಲುಗಳನ್ನು ಪಶ್ಚಿಮ ಘಟ್ಟದ ಹೊರಭಾಗದಿಂದ ತರಲು ಸಾಧ್ಯವಿಲ್ಲವೇ? ಸಾಮಾನ್ಯ ಜನರ ಅಭಿವೃದ್ಧಿ ಯೋಜನೆಗಳಿಗೆ ಧಾರಣ ಶಕ್ತಿ (Carrying Capacity) ಅಧ್ಯಯನವನ್ನು ಕಡ್ಡಾಯಗೊಳಿಸಲಾಗುತ್ತದೆ. ಆದರೆ ಇಂತಹ ಬೃಹತ್ ಯೋಜನೆಗೆ ಆ ಅಧ್ಯಯನದ ಅಗತ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು, ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ನೀಡಬೇಕು ರಾಮು ನಾಯ್ಕ ಆಗ್ರಹಿಸಿದ್ದಾರೆ.