Monday, September 7, 2026
Join WhatsApp Group
HomeLocal Newsಕಟ್ಟೆಚ್ಚರದಲ್ಲಿ ಪಿಸಿ ಪರೀಕ್ಷೆ; ಅಕ್ರಮ ತಡೆಗೆ AI ಕಣ್ಗಾವಲು!

ಕಟ್ಟೆಚ್ಚರದಲ್ಲಿ ಪಿಸಿ ಪರೀಕ್ಷೆ; ಅಕ್ರಮ ತಡೆಗೆ AI ಕಣ್ಗಾವಲು!

ಪರೀಕ್ಷಾ ಕೊಠಡಿಗೆ ಪೊಲೀಸ್ ಅಧಿಕಾರಿಗಳಿಗೂ ಪ್ರವೇಶವಿಲ್ಲ!

ಕಾರವಾರ: ಆಗಸ್ಟ್‌ 2ರಂದು ನಡೆಯಲಿರುವ ಪೊಲೀಸ್ ಸಿವಿಲ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಾರವಾರದ 15 ಹಾಗೂ ಅಂಕೋಲಾದ 5 ಸೇರಿ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 6,475 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಕೆ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ವ್ಯವಸ್ಥೆ, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಿಸುವ ವಾಹನಗಳಿಗೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಸೂಚಿಸಲಾಯಿತು.

ಪರೀಕ್ಷಾ ಪ್ರಾಧಿಕಾರದ ಸೂಚನೆಯಂತೆ ಅಭ್ಯರ್ಥಿಗಳ ಡ್ರೆಸ್‌ ಕೋಡ್ ಹಾಗೂ ನಿಷೇಧಿತ ವಸ್ತುಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಮಹಿಳೆಯರಿಗೆ ಪ್ರತ್ಯೇಕ ತಪಾಸಣಾ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಇಲಾಖೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಈ ಬಾರಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಸಿಸಿಟಿವಿ ಕಣ್ಗಾವಲು ಜೊತೆಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಮೊಬೈಲ್, ಬ್ಲೂಟೂತ್, ಇಯರ್‌ಫೋನ್, ಕ್ಯಾಲ್ಕುಲೇಟರ್, ಪರ್ಸ್, ಬೆಲ್ಟ್, ಕೈಗಡಿಯಾರ, ಹ್ಯಾಂಡ್‌ಬ್ಯಾಗ್ ಸೇರಿದಂತೆ ಯಾವುದೇ ವೈಯಕ್ತಿಕ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅವಕಾಶ ನೀಡಲಾಗುವುದಿಲ್ಲ.

ಡ್ರೆಸ್‌ ಕೋಡ್‌ನಂತೆ ಪೂರ್ಣ ತೋಳಿನ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ. ಲೋಹದ ಆಭರಣಗಳಿಗೆ ನಿಷೇಧವಿದ್ದು, ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಜನಿವಾರ ಹಾಗೂ ಶಿವದಾರ ಧರಿಸಲು ಅವಕಾಶವಿದೆ. ಬೂಟಿನ ಬದಲಿಗೆ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸಿ ಬರಲು ಸೂಚಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಪರೀಕ್ಷೆ ಆರಂಭವಾದ ಬಳಿಕ ಪರೀಕ್ಷಾ ಕೊಠಡಿಗೆ ಪೊಲೀಸ್ ಅಧಿಕಾರಿಗಳಿಗೂ ಪ್ರವೇಶ ಇರುವುದಿಲ್ಲ. ಪರೀಕ್ಷೆಯ ಹಿಂದಿನ ದಿನ ಕೇಂದ್ರಗಳಿಗೆ ಆಗಮಿಸುವ ವಾಹನಗಳ ವಿವರ ದಾಖಲಿಸಬೇಕು ಹಾಗೂ ಅನಧಿಕೃತ ವ್ಯಕ್ತಿಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share