ರಸ್ತೆಗಳು ನೇರವಾಗಿರದೇ ತಿರುವಾಗಿ ಇರುವುದೇಕೆ?!
ಒಂದು ಸಲ ಗೂಗಲ್ ಮ್ಯಾಪ್ ತೆರೆದು ಎರಡು ಊರುಗಳ ನಡುವೆ ರಸ್ತೆ ಹೇಗೆ ಹೋಗಿದೆ ಅಂತ ನೋಡಿ. ಒಂದು ನೇರ ಗೆರೆ ಎಳೆಯುವ ಬದಲು ರಸ್ತೆ ಎಡಕ್ಕೆ, ಬಲಕ್ಕೆ, ಕೆಲವೊಮ್ಮೆ ದೊಡ್ಡ ವೃತ್ತವನ್ನೇ ಹೊಡೆದು ಮುಂದೆ ಸಾಗಿರುವುದು ಕಾಣುತ್ತದೆ. ಬೆಟ್ಟದ ರಸ್ತೆಗಳಂತೂ ಹಾವಿನಂತೆ ಬಳುಕುತ್ತಾ ಮೇಲಕ್ಕೆ ಏರುತ್ತವೆ. ಆಗ ಸಹಜವಾಗಿಯೇ ಪ್ರಶ್ನೆ ಮೂಡುತ್ತದೆ. “ನೇರ ರಸ್ತೆ ಮಾಡಬಹುದಿತ್ತಲ್ಲ… ಹಾಗಿದ್ದರೆ ಈ ಅಂಕು-ಡೊಂಕು ಯಾಕೆ?”
ಮೊದಲ ನೋಟಕ್ಕೆ ನೇರ ರಸ್ತೆ ಎಂದರೆ ಕಡಿಮೆ ದೂರ, ಕಡಿಮೆ ಸಮಯ ಮತ್ತು ಕಡಿಮೆ ಇಂಧನ ಖರ್ಚು. ಆದರೆ ರಸ್ತೆ ನಿರ್ಮಾಣವೆಂದರೆ ಕೇವಲ ಎರಡು ಬಿಂದುಗಳನ್ನು ಸೇರಿಸುವ ಗಣಿತದ ಪ್ರಶ್ನೆಯಲ್ಲ. ಅದರ ಹಿಂದೆ ಭೂಗೋಳ, ವಿಜ್ಞಾನ, ಎಂಜಿನಿಯರಿಂಗ್, ಪರಿಸರ ಮತ್ತು ಅರ್ಥಶಾಸ್ತ್ರ ಎಲ್ಲವೂ ಕೆಲಸ ಮಾಡುತ್ತವೆ.
ಬೆಟ್ಟದ ರಸ್ತೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಬೆಟ್ಟದ ಕೆಳಗಿನಿಂದ ಮೇಲಕ್ಕೆ ನೇರವಾಗಿ ರಸ್ತೆ ಮಾಡಿದರೆ ಅದು ತುಂಬಾ ಕಡಿದಾದ ಘಟ್ಟವನ್ನು ಹೊಂದಿರುತ್ತದೆ. ಅಂತಹ ರಸ್ತೆಯಲ್ಲಿ ವಾಹನ ಚಲಾಯಿಸುವುದು ಕಷ್ಟವಾಗುತ್ತದೆ. ಅದರಲ್ಲೂ ಭಾರವಾದ ವಾಹನಗಳು ಏರುವಾಗ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇಳಿಜಾರಿನಲ್ಲಿ ಕೆಳಗೆ ಬರುವಾಗ ವಾಹನದ ವೇಗವನ್ನು ನಿಯಂತ್ರಿಸುವುದಂತೂ ಕಷ್ಟವೇ. ಮಳೆಗಾಲದಲ್ಲಿ ರಸ್ತೆ ಒದ್ದೆಯಾಗಿದ್ದರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ.
ಆದ್ದರಿಂದ ಬೆಟ್ಟಗಳಲ್ಲಿ ರಸ್ತೆಗಳನ್ನು ಸಾಮಾನ್ಯವಾಗಿ ತಿರುವು ತಿರುವಾಗಿ, ಬೆಟ್ಟದ ಇಳಿಜಾರಿಗೆ ಹೊಂದಿಕೊಂಡು ನಿರ್ಮಿಸಲಾಗುತ್ತದೆ. ಹೀಗೆ ಮಾಡಿದಾಗ ರಸ್ತೆಯ ಉದ್ದ ಹೆಚ್ಚಾದರೂ ಕೂಡ ಏರು ಮತ್ತು ಇಳಿಜಾರಿನ ಪ್ರಮಾಣ ಕಡಿಮೆಯಾಗುತ್ತದೆ. ವಾಹನಗಳು ನಿಧಾನವಾಗಿ ಮತ್ತು ಸುಲಭವಾಗಿ ಮೇಲಕ್ಕೆ ಹೋಗಬಹುದು. ಚಾಲಕರಿಗೂ ವಾಹನ ನಿಯಂತ್ರಿಸಲು ಅನುಕೂಲವಾಗುತ್ತದೆ. ಅಂದರೆ, ಕಡಿಮೆ ದೂರಕ್ಕಿಂತ ವಾಹನ ಸಂಚಾರಕ್ಕೆ ಸೂಕ್ತವಾದ ದಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ನದಿ ಅಥವಾ ಆಳವಾದ ಕಣಿವೆ ಎದುರಾದಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ನೇರವಾಗಿ ರಸ್ತೆ ಮುಂದುವರಿಸಬೇಕೆಂದರೆ ದೊಡ್ಡ ಸೇತುವೆಯನ್ನು ನಿರ್ಮಾಣಮಾಡಬೇಕಾಗುತ್ತದೆ. ಕೆಲವು ಕಡೆಗಳಲ್ಲಂತೂ ಸುರಂಗವನ್ನೂ ನಿರ್ಮಿಸಬೇಕಾದ ಸಂದರ್ಭ ಎದುರಾಗುತ್ತವೆ.
ಇಂತಹ ನಿರ್ಮಾಣಗಳಿಗೆ ಹೆಚ್ಚಿನ ಹಣ ಮತ್ತು ತಾಂತ್ರಿಕ ವ್ಯವಸ್ಥೆ ಅಗತ್ಯವಿರುತ್ತದೆ. ಅದರ ಬದಲು ನದಿಯ ಸೂಕ್ತವಾದ ಭಾಗದಿಂದ ದಾಟುವಂತೆ ಅಥವಾ ಕಣಿವೆಯನ್ನು ತಪ್ಪಿಸುವಂತೆ ರಸ್ತೆಯ ದಾರಿಯನ್ನು ಸ್ವಲ್ಪ ಬದಲಿಸಿದರೆ ನಿರ್ಮಾಣದ ಖರ್ಚು ಕಡಿಮೆಯಾಗುತ್ತದೆ. ಹೀಗಾಗಿ ತಿರುವು ಇರುವ ಪ್ರತಿಯೊಂದು ರಸ್ತೆಯೂ ಅನಗತ್ಯವಾಗಿ ಸುತ್ತಿ ಬರುವ ರಸ್ತೆ ಎಂದೇನೂ ಅಲ್ಲ. ಕೆಲವೊಮ್ಮೆ ಅದೇ ಹೆಚ್ಚು ಸೂಕ್ತವಾದ ಮಾರ್ಗವಾಗಿರುತ್ತದೆ.
ಕಾಡು ಪ್ರದೇಶಗಳಲ್ಲೂ ರಸ್ತೆ ನೇರವಾಗಿರದೇ, ವಕ್ರವಾಗಿರಲು ಪರಿಸರವೇ ಒಂದು ಪ್ರಮುಖ ಕಾರಣ. ನೇರ ರಸ್ತೆ ಮಾಡುವುದಕ್ಕಾಗಿ ಸಾಕಷ್ಟು ಮರಗಳನ್ನು ಕಡಿದು ಕಾಡನ್ನು ತೆರವು ಮಾಡಬೇಕಾದರೆ ಪರಿಸರಕ್ಕೆ ಹಾನಿಯಾಗುತ್ತದೆ. ಕಾಡಿನಲ್ಲಿರುವ ಪ್ರಾಣಿಗಳ ಓಡಾಟಕ್ಕೂ ತೊಂದರೆಯಾಗುವುದು.
ಮನೆಗಳು, ಅಂಗಡಿಗಳು ಮತ್ತು ಕೃಷಿ ಜಮೀನುಗಳು ಇರುವ ಪ್ರದೇಶಗಳಲ್ಲೂ ರಸ್ತೆ ನಿರ್ಮಿಸಬೇಕಾಗಿ ಬಂದಾಗ ಅವುಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಿಸುವುದು ಸುಲಭವಲ್ಲ. ಜನರಿಂದ ಭೂಸ್ವಾಧಿನಪಡಿಸಿಕೊಳ್ಳಲು ಪರಿಹಾರ ನೀಡಬೇಕಾಗುತ್ತದೆ. ತಂಟೆ-ತಕರಾರು, ವ್ಯಾಜ್ಯ ಎದುರಾದಾಗ ಪರಿಹರಿಸಿಕೊಳ್ಳಲು ವರ್ಷಗಳೇ ತಗಲಬಹುದು. ಸಾಧ್ಯವಾದರೆ ಇಂತಹ ಪ್ರದೇಶಗಳನ್ನು ತಪ್ಪಿಸಿ ರಸ್ತೆ ನಿರ್ಮಿಸುವ ದಾರಿಯನ್ನು ಆಯ್ಕೆ ಮಾಡಲಾಗುತ್ತದೆ.
ಇನ್ನು ಉದ್ದನೆಯ ಮತ್ತು ಒಂದೇ ರೀತಿಯ ನೇರ ರಸ್ತೆಯಲ್ಲಿ ಬಹಳ ಹೊತ್ತು ವಾಹನ ಚಲಾಯಿಸುವಾಗ ಚಾಲಕನ ಗಮನ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದನ್ನು ‘ಹೈವೇ ಹಿಪ್ನಾಸಿಸ್ʼ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಚಾಲಕನ ಕಣ್ಣು ರಸ್ತೆಯ ಮೇಲಿದ್ದರೂ, ಮನಸ್ಸು ಬೇರೆ ವಿಚಾರಗಳ ಕಡೆಗೆ ವಾಲಬಹುದು.
ತಾನು ಎಷ್ಟು ದೂರ ವಾಹನ ಚಲಾಯಿಸಿದ್ದೇನೆ ಎಂಬ ಅರಿವೂ ಕಡಿಮೆಯಾಗುವುದು. ದಣಿವು ಅಥವಾ ನಿದ್ರೆ ಇದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಇದರಿಂದ ತಿರುವುಗಳಿರುವ ರಸ್ತೆಗಳು ನೇರ ರಸ್ತೆಗಳಿಗಿಂತ ಹೆಚ್ಚು ಸುರಕ್ಷಿತ ಎಂದು ಅರ್ಥವಲ್ಲ. ಯಾವುದೇ ರಸ್ತೆಯಲ್ಲಾದರೂ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಮತ್ತು ದಣಿವಾದಾಗ ವಿಶ್ರಾಂತಿ ಪಡೆಯುವುದು ಅತ್ಯಂತ ಮುಖ್ಯ.
ರಸ್ತೆ ನಿರ್ಮಿಸುವಾಗ ಎರಡು ಸ್ಥಳಗಳ ನಡುವಿನ ಅಂತರ ಮಾತ್ರವಲ್ಲ, ಭೂಪ್ರದೇಶ ಹೇಗಿದೆ, ವಾಹನಗಳು ಸುರಕ್ಷಿತವಾಗಿ ಓಡಾಡಬಹುದೇ, ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ, ಪರಿಸರಕ್ಕೆ ಎಷ್ಟು ಹಾನಿಯಾಗುತ್ತದೆ ಮತ್ತು ಜನರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನೆಲ್ಲ ಪರಿಗಣಿಸಲಾಗುತ್ತದೆ.
ಹೀಗಾಗಿ ಗಣಿತದ ಲೆಕ್ಕದಲ್ಲಿ ನೇರ ರೇಖೆ ಕಡಿಮೆ ದೂರವಾಗಿರಬಹುದು. ಆದರೆ ರಸ್ತೆ ನಿರ್ಮಾಣದ ವಿಷಯದಲ್ಲಿ ಕಡಿಮೆ ದೂರದ ದಾರಿಯೊಂದೇ ಯಾವಾಗಲೂ ಉತ್ತಮ ದಾರಿ ಎಂದೇನೂ ಅಲ್ಲ. ಭೂಪ್ರದೇಶಕ್ಕೆ ಹೊಂದಿಕೊಂಡು, ಸುರಕ್ಷಿತವಾಗಿ, ಪರಿಸರಕ್ಕೆ ಸಾಧ್ಯವಾದಷ್ಟು ಕಡಿಮೆ ಹಾನಿ ಉಂಟುಮಾಡಿ ಮತ್ತು ಜನರ ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾದ ದಾರಿಯೇ ನಿಜವಾದ ಅರ್ಥದಲ್ಲಿ ಉತ್ತಮ ರಸ್ತೆ ಎನ್ನಿಸಿಕೊಳ್ಳುತ್ತದೆ.
ಕೆಲವೊಮ್ಮೆ ಜೀವನದಲ್ಲೂ ಹಾಗೆಯೇ… ನೇರ ದಾರಿಗಿಂತ ಸರಿಯಾದ ದಾರಿಯೇ ಹೆಚ್ಚು ಮುಖ್ಯ!