Sunday, September 6, 2026
Join WhatsApp Group
HomeInformationSpecialನೂರು ಪಾಠ ಕಲಿಸುವ ಜಗದ್ಗುರು 'ಕೃಷ್ಣ'

ನೂರು ಪಾಠ ಕಲಿಸುವ ಜಗದ್ಗುರು ‘ಕೃಷ್ಣ’

ಕೃಷ್ಣ’ ದೇವರಿಗಿಂತಲೂ ಮಿಗಿಲಾಗಿ, ಬದುಕನ್ನು ಕಲಿಸಿದ ವ್ಯಕ್ತಿತ್ವ

ನಮ್ಮ ಜೀವನದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲ ಕಳೆದಂತೆ ಮರೆತುಹೋಗುತ್ತವೆ. ಆದರೆ ಕೆಲವು ವ್ಯಕ್ತಿತ್ವಗಳು ಎಷ್ಟೇ ವರ್ಷಗಳು ಕಳೆದರೂ ನೆನಪಿನಲ್ಲೇ ಇರುತ್ತವೆ. ಕೃಷ್ಣ ಅಂತಹ ಒಂದು ವ್ಯಕ್ತಿತ್ವ. ಸಾವಿರಾರು ವರ್ಷಗಳಿಂದ ಜನರು ಅವನನ್ನು ಪೂಜಿಸುತ್ತಿದ್ದಾರೆ, ಹಾಡುಗಳನ್ನು ಹಾಡುತ್ತಿದ್ದಾರೆ, ಕಥೆಗಳನ್ನು ಹೇಳುತ್ತಿದ್ದಾರೆ. ಆದರೆ ಅಷ್ಟಕ್ಕೇ ಕೃಷ್ಣನ ಕಥೆ ಮುಗಿಯುವುದಿಲ್ಲ. ಅವನ ಜೀವನದ ಒಂದೊಂದು ಘಟನೆಗೂ ಒಂದೊಂದು ಪ್ರಶ್ನೆಯಿದೆ. ಒಂದೊಂದು ನಿರ್ಧಾರದ ಹಿಂದೆ ಒಂದೊಂದು ವಿಚಾರವಿದೆ. ಅದಕ್ಕಾಗಿಯೇ ಕೃಷ್ಣನನ್ನು ಕೇವಲ ಪುರಾಣದ ಪಾತ್ರವಾಗಿ ಅಥವಾ ದೇವರ ರೂಪವಾಗಿ ನೋಡುವುದಕ್ಕಿಂತ, ಬದುಕನ್ನು ಹಲವು ಕೋನಗಳಿಂದ ಅರ್ಥಮಾಡಿಕೊಳ್ಳಲು ನೆರವಾಗುವ ವಿಶಿಷ್ಟ ವ್ಯಕ್ತಿತ್ವವಾಗಿ ನೋಡುವ ಅಗತ್ಯವಿದೆ.

ಭಾರತೀಯ ಸಂಸ್ಕೃತಿಯಲ್ಲಿ ರಾಮನನ್ನು ಆದರ್ಶದ ಪ್ರತೀಕವಾಗಿ ನೋಡಿದರೆ, ಕೃಷ್ಣನನ್ನು ಜೀವನದ ವಾಸ್ತವದ ಪ್ರತೀಕವಾಗಿ ನೋಡಬಹುದು. ರಾಮನ ಜೀವನದಲ್ಲಿ ನಿಯಮ ಮತ್ತು ಆದರ್ಶಗಳಿಗೆ ಹೆಚ್ಚಿನ ಮಹತ್ವವಿದ್ದರೆ, ಕೃಷ್ಣನ ಜೀವನದಲ್ಲಿ ಪರಿಸ್ಥಿತಿಗೆ ತಕ್ಕ ನಿರ್ಧಾರಗಳಿಗೆ ಮಹತ್ವ ಕಾಣುತ್ತದೆ. ಅದಕ್ಕಾಗಿಯೇ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆತ ಒಂದೇ ಚೌಕಟ್ಟಿನಲ್ಲಿ ಸಿಗುವ ವ್ಯಕ್ತಿಯಲ್ಲ!

ನಿಜ ಜೀವನದಲ್ಲಿ ಎಲ್ಲ ಸಂದರ್ಭಗಳೂ ಒಂದೇ ರೀತಿಯಾಗಿರುವುದಿಲ್ಲ. ಒಂದು ಸಂದರ್ಭದಲ್ಲಿ ಸರಿಯಾಗಿರುವ ನಿರ್ಧಾರ, ಇನ್ನೊಂದು ಸಂದರ್ಭದಲ್ಲಿ ಸರಿಯಾಗಿರಬೇಕೆಂದಿಲ್ಲ. ಎಲ್ಲವನ್ನೂ ತಪ್ಪು ಅಥವಾ ಸರಿ ಎಂದು ಸುಲಭವಾಗಿ ವಿಂಗಡಿಸಲು ಸಾಧ್ಯವಿಲ್ಲ. ಸರಿ ಮತ್ತು ತಪ್ಪಿನ ನಡುವೆ ಕೆಲವೊಮ್ಮೆ ತುಂಬಾ ಸಂಕೀರ್ಣವಾದ ಪರಿಸ್ಥಿತಿಗಳು ಎದುರಾಗುತ್ತವೆ.

ಕೃಷ್ಣನ ಜೀವನದಲ್ಲಿ ಈ ಸಂಕೀರ್ಣತೆ ಸ್ಪಷ್ಟವಾಗಿ ಕಾಣುತ್ತದೆ. ವಿಶೇಷವಾಗಿ ಮಹಾಭಾರತದ ಸಂದರ್ಭದಲ್ಲಿ ಆತ ಹಲವು ತಂತ್ರಗಳನ್ನು ಬಳಸುತ್ತಾನೆ. ಧರ್ಮವನ್ನು ಉಳಿಸುವ ಉದ್ದೇಶಕ್ಕಾಗಿ ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ನಿಯಮಗಳಿಗಿಂತ ಪರಿಸ್ಥಿತಿಯ ಅಗತ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾನೆ. ಕೆಲವರಿಗೆ ಕೃಷ್ಣ ಈಗಲೂ ತಪ್ಪಾಗಿ ಕಾಣಬಹುದು. ಆದರೆ ಆ ಸಂದರ್ಭಕ್ಕೆ ಕೃಷ್ಣ ತೆಗೆದುಕೊಂಡ ನಿರ್ಧಾರಗಳು ಸರಿಯೇ..!

ಆದರೆ ಇಲ್ಲಿಯೇ ಒಂದು ದೊಡ್ಡ ಪ್ರಶ್ನೆ ಹುಟ್ಟುತ್ತದೆ. ಒಳ್ಳೆಯ ಉದ್ದೇಶಕ್ಕಾಗಿ ಯಾವುದೇ ವಿಧಾನವನ್ನು ಬಳಸಬಹುದೇ? ಗುರಿ ಒಳ್ಳೆಯದಾಗಿದೆ ಎಂದ ಮಾತ್ರಕ್ಕೆ ಅದನ್ನು ತಲುಪುವ ಎಲ್ಲ ದಾರಿಗಳೂ ಸರಿಯಾಗಿರುತ್ತದೆಯೇ?

ಈ ಪ್ರಶ್ನೆಗಳಿಗೆ ಎಲ್ಲರೂ ಒಂದೇ ಉತ್ತರ ನೀಡುವುದಿಲ್ಲ. ಆದರೆ ಇದೇ ಕೃಷ್ಣನ ವ್ಯಕ್ತಿತ್ವದ ವೈಚಾರಿಕ ವಿಶೇಷತೆ. ಅವನ ಜೀವನವನ್ನು ಕೇವಲ ಭಕ್ತಿಯ ದೃಷ್ಟಿಯಿಂದ ಮಾತ್ರವಲ್ಲದೆ, ಪ್ರಶ್ನೆಗಳ ಮೂಲಕವೂ ನೋಡಬೇಕಾಗುತ್ತದೆ. ಏಕೆಂದರೆ ಪ್ರಶ್ನೆಗಳನ್ನು ಕೇಳುವುದು ನಂಬಿಕೆಗೆ ವಿರುದ್ಧವಾದ ಸಂಗತಿಯಲ್ಲ. ಪ್ರಶ್ನೆಗಳ ಮೂಲಕವೇ ಒಂದು ವ್ಯಕ್ತಿತ್ವದ ಆಳವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಪ್ರಶ್ನಿಸುತ್ತಾರೆ ಎಂದ ಮಾತ್ರಕ್ಕೆ ಅಧಿಕಪ್ರಸಂಗಿ ಅಂತಲೂ ಅಲ್ಲ, ಪ್ರಶ್ನಿಸುವುದರಿಂದ ಯಾವುದೋ ಹೊಸದೊಂದು ವಿಷಯ ಹೊರಬೀಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಕೃಷ್ಣನ ವ್ಯಕ್ತಿತ್ವದಲ್ಲಿ ಮತ್ತೊಂದು ಮುಖ್ಯವಾದ ಅಂಶವೆಂದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಜೀವನದಲ್ಲಿ ಕೇವಲ ಭಾವನೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡರೆ ಅನೇಕ ಬಾರಿ ತಪ್ಪಾಗುತ್ತದೆ. ಅದೇ ರೀತಿ ಕೇವಲ ನಿಯಮಗಳನ್ನೇ ಹಿಡಿದುಕೊಂಡು ನಡೆದರೂ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಯಾವ ಸಂದರ್ಭದಲ್ಲಿ ಯಾವುದು ಮುಖ್ಯ ಎಂಬುದನ್ನು ಅರಿತುಕೊಳ್ಳುವ ವಿವೇಕವೂ ಬೇಕು.

ಇವತ್ತಿನ ಸಮಾಜದಲ್ಲಿ ಈ ವಿಚಾರ ತುಂಬಾ ಮುಖ್ಯವಾಗಿದೆ. ಒಂದು ಘಟನೆ ನಡೆದ ತಕ್ಷಣ ಅದರ ಸಂಪೂರ್ಣ ಸತ್ಯ ತಿಳಿಯುವ ಮೊದಲೇ ತೀರ್ಪು ನೀಡುವುದು ಸಾಮಾನ್ಯವ. ಸೋಶಿಯಲ್ ಮೀಡಿಯಾಗಳಲ್ಲಿ ಒಂದೆರಡು ಸಾಲುಗಳನ್ನು ನೋಡಿ ವ್ಯಕ್ತಿಗಳ ಬಗ್ಗೆ ನಿರ್ಧಾರ ಮಾಡಿಬಿಡುತ್ತೇವೆ. ಒಂದು ಘಟನೆಯ ಹಿಂದೆ ಇರುವ ಸಂಪೂರ್ಣ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಯಾರಿಗೂ ಸಮಯವಿಲ್ಲ. 

ಯಾವುದೇ ಘಟನೆಗಾದರೂ ಹಲವು ಆಯಾಮಗಳಿರುತ್ತವೆ ಎನ್ನುವುದನ್ನು ಮರೆಯಬಾರದು. ನಮಗೆ ಮನಸ್ಸಿಗೆ ನೆಚ್ಚಿನವರು ಎಂದ ಮಾತ್ರಕ್ಕೆ ಎಲ್ಲವೂ ಸರಿಯೇ ಇರುತ್ತದೆ, ಅವರಿಂದ ತಪ್ಪುಗಳೇ ನಡೆಯುವುದಿಲ್ಲ ಅಂತಲೂ ಅಲ್ಲ. ತಪ್ಪು- ಸರಿಗಳನ್ನು ವಿಮರ್ಶಿಸಿ ಬೆಂಬಲಿಸುವುದೂ ಮುಖ್ಯ.

ಒಬ್ಬ ವ್ಯಕ್ತಿಯ ಒಂದು ತಪ್ಪಿನಿಂದಲೇ ಆತನ ಇಡೀ ಬದುಕನ್ನು ಅಳೆಯಲು ಸಾಧ್ಯವಿಲ್ಲ. ಅದೇ ರೀತಿ ಒಂದು ಒಳ್ಳೆಯ ಕೆಲಸದಿಂದ ಆ ವ್ಯಕ್ತಿಯ ಎಲ್ಲ ತಪ್ಪುಗಳನ್ನು ಮರೆತುಬಿಡುವುದೂ ಸರಿಯಲ್ಲ. ವ್ಯಕ್ತಿ, ಸಮಾಜ ಮತ್ತು ಬದುಕನ್ನು ಅರ್ಥಮಾಡಿಕೊಳ್ಳಲು ಆಳವಾಗಿ ಯೋಚಿಸುವ ಸಾಮರ್ಥ್ಯ ಬೇಕು.

ಕೃಷ್ಣನ ವ್ಯಕ್ತಿತ್ವ ನಮಗೆ ಬಹುಶಃ ಇದನ್ನೇ ಕಲಿಸುತ್ತದೆ. ಯಾವುದನ್ನೂ ಮೇಲ್ನೋಟಕ್ಕೆ ನೋಡಿ ನಿರ್ಧಾರ ಮಾಡಬೇಡ, ಪರಿಸ್ಥಿತಿಯನ್ನು ಅರ್ಥಮಾಡಿಕೋ, ಎಲ್ಲರ ಮಾತನ್ನೂ ಕೇಳು, ನಂತರ ನಿನ್ನ ವಿವೇಕದಿಂದ ನಿರ್ಧಾರವನ್ನು ತೆಗೆದುಕೋ… ಭಗವದ್ಗೀತೆಯಲ್ಲಿರುವ ಕರ್ಮದ ವಿಚಾರವೂ ಇದನ್ನೇ ಹೇಳುತ್ತದೆ.

 ನಾವು ಮಾಡುವ ಕೆಲಸಕ್ಕೆ ಫಲ ಸಿಗಲೇಬೇಕು ಎಂಬ ನಿರೀಕ್ಷೆಯಲ್ಲಿಯೇ ಬದುಕಿದರೆ ನಿರಾಶೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಯಶಸ್ಸು ಸಿಗುತ್ತದೆಯೇ? ಜನರು ಏನು ಹೇಳುತ್ತಾರೆ? ಸೋತರೆ ಏನಾಗುತ್ತದೆ? ಎಂಬ ಪ್ರಶ್ನೆಗಳಲ್ಲಿಯೇ ಎಷ್ಟೋ ಜನ ತಮ್ಮ ಪ್ರಯತ್ನವನ್ನು ಆರಂಭಿಸುವ ಮೊದಲೇ ಕೈಬಿಡುತ್ತಾರೆ.

ಕೃಷ್ಣನ ಕರ್ಮದ ಸಂದೇಶವನ್ನು ಸರಳವಾಗಿ ಅರ್ಥಮಾಡಿಕೊಂಡರೆ, ನಮ್ಮ ಕೈಯಲ್ಲಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಾಗಿದೆ. ಫಲದ ಭಯದಿಂದ ಕರ್ತವ್ಯವನ್ನು ಬಿಟ್ಟುಬಿಡಬಾರದು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಸಂಪೂರ್ಣ ಪ್ರಯತ್ನವಿದ್ದರೆ ಅದರ ಪರಿಣಾಮ ಒಂದಲ್ಲ ಒಂದು ರೂಪದಲ್ಲಿ ನಮ್ಮ ಬದುಕಿಗೆ ಮರಳಿಯೇ ಬರುತ್ತದೆ.

ಆದರೆ ಕರ್ಮದ ವಿಚಾರವನ್ನು ಕೇವಲ ಯಶಸ್ಸು ಪಡೆಯುವ ಮಾರ್ಗವಾಗಿ ನೋಡುವುದೂ ಸರಿಯಲ್ಲ. ಪ್ರತಿಫಲದ ನಿರೀಕ್ಷೆಯಿಲ್ಲದೆ ಕೆಲಸ ಮಾಡುವುದರಲ್ಲಿ ಒಂದು ರೀತಿಯ ಮನಸ್ಸಿನ ಸ್ವಾತಂತ್ರ್ಯವಿದೆ. ಯಾರ ಮೆಚ್ಚುಗೆಗಾಗಿ ಅಥವಾ ಯಾರ ಹೊಗಳಿಕೆಗಾಗಿ ಕೆಲಸ ಮಾಡದೇ, ಅದು ನಮ್ಮ ಕರ್ತವ್ಯ ಎಂಬ ಕಾರಣಕ್ಕೆ ಕೆಲಸ ಮಾಡಿದಾಗ ನಮ್ಮೊಳಗಿನ ಒತ್ತಡವೂ ಕಡಿಮೆಯಾಗುತ್ತದೆ.

ಕೃಷ್ಣ ಎಂದರೆ ಕೇವಲ ಗಂಭೀರವಾದ ತತ್ವಜ್ಞಾನದ ಪ್ರತೀಕವೂ ಅಲ್ಲ. ಆತ ಸಂಗೀತ ಪ್ರಿಯ, ಸ್ನೇಹಕ್ಕೆ ಬೆಲೆ ಕೊಡುವ, ಪ್ರೀತಿಯನ್ನು ಗೌರವಿಸುವ ಮತ್ತು ಜೀವನವನ್ನು ಸಂಭ್ರಮಿಸುವ ವ್ಯಕ್ತಿಯಾಗಿಯೂ ಕಾಣುತ್ತಾನೆ. ಒಂದು ಕಡೆ ಕುರುಕ್ಷೇತ್ರದಂತಹ ಭೀಕರ ಸನ್ನಿವೇಶದ ನಡುವೆ ಜೀವನದ ತತ್ವವನ್ನು ಹೇಳುವ ಕೃಷ್ಣ, ಇನ್ನೊಂದು ಕಡೆ ಕೊಳಲು ನುಡಿಸುತ್ತಾ ಬದುಕಿನ ಸೌಂದರ್ಯವನ್ನು ಸಂಭ್ರಮಿಸುವ ಕೃಷ್ಣ. ಇದು ನಮಗೆ ಒಂದು ಮುಖ್ಯವಾದ ವಿಚಾರವನ್ನು ಹೇಳುತ್ತದೆ. ಬದುಕಿನಲ್ಲಿ ಜವಾಬ್ದಾರಿ ಇರಬೇಕು, ಆದರೆ ಸಂತೋಷಕ್ಕೂ ಜಾಗ ಇರಬೇಕು. ಕೇವಲ ಕೆಲಸ, ಹಣ ಮತ್ತು ಯಶಸ್ಸಿನ ಹಿಂದೆ ಓಡುತ್ತಾ ಜೀವಿಸುವುದನ್ನೇ ಮರೆಯಬಾರದು.

ಬಹುಶಃ ಕೃಷ್ಣನ ವ್ಯಕ್ತಿತ್ವದ ದೊಡ್ಡ ವಿಶೇಷವೆಂದರೆ ಆತ ಮನುಷ್ಯನ ಬದುಕಿನ ಎಲ್ಲ ಬಣ್ಣಗಳನ್ನೂ ಪ್ರತಿನಿಧಿಸುತ್ತಾನೆ. ಪ್ರೀತಿ, ಸ್ನೇಹ, ರಾಜಕೀಯ, ಯುದ್ಧ, ತಂತ್ರ, ತತ್ವಜ್ಞಾನ ಮತ್ತು ಸಂತೋಷ—ಎಲ್ಲವೂ ಕೃಷ್ಣನ ಕಥೆಯಲ್ಲಿ ಕಾಣುತ್ತವೆ. ಅದಕ್ಕಾಗಿಯೇ ಕೃಷ್ಣ ಸಾವಿರಾರು ವರ್ಷಗಳ ನಂತರವೂ ಕೇವಲ ಪೂಜಿಸಲ್ಪಡುವ ವ್ಯಕ್ತಿಯಾಗದೆ, ಚರ್ಚಿಸಲ್ಪಡುವ ವ್ಯಕ್ತಿಯಾಗಿದ್ದಾನೆ.

ಕೃಷ್ಣನನ್ನು ದೇವರೆಂದು ನಂಬುವವರಿಗೆ ಆತ ಆರಾಧ್ಯ ದೈವ. ಆದರೆ ವೈಚಾರಿಕವಾಗಿ ನೋಡುವವರಿಗೆ ಕೃಷ್ಣ ಒಂದು ಸಂಕೀರ್ಣ ಮತ್ತು ಆಳವಾದ ವ್ಯಕ್ತಿತ್ವ. ಅವನನ್ನು ಅರ್ಥಮಾಡಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ಅವನನ್ನು ಎಲ್ಲ ಪ್ರಶ್ನೆಗಳಿಗೂ ಸಿದ್ಧ ಉತ್ತರವಾಗಿ ನೋಡುವುದಲ್ಲ. ಬದುಕಿನ ಹಲವು ಪ್ರಶ್ನೆಗಳ ಬಗ್ಗೆ ಯೋಚಿಸುವಂತೆ ಮಾಡುವ ವ್ಯಕ್ತಿತ್ವವಾಗಿ ನೋಡುವುದು.

ಯಾಕೆಂದರೆ ಕೃಷ್ಣನ ಕಥೆ ನಮಗೆ ಎಲ್ಲ ಪ್ರಶ್ನೆಗಳಿಗೂ ಸಿದ್ಧ ಉತ್ತರ ಕೊಡುವುದಿಲ್ಲ. ಬದಲಾಗಿ, ಸರಿಯಾದ ಪ್ರಶ್ನೆಗಳನ್ನು ಕೇಳುವುದನ್ನು ಕಲಿಸುತ್ತದೆ. ಮತ್ತು ಕೆಲವೊಮ್ಮೆ ಉತ್ತರಕ್ಕಿಂತ ಸರಿಯಾದ ಪ್ರಶ್ನೆಯೇ ನಮ್ಮ ಯೋಚನೆಯ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತದೆ.

ಬಹುಶಃ ಅದಕ್ಕಾಗಿಯೇ ಕೃಷ್ಣ ಕೇವಲ ಪುರಾಣದ ಒಂದು ಪಾತ್ರವಾಗಿಲ್ಲ. ಕಾಲ ಬದಲಾದರೂ, ಸಮಾಜ ಬದಲಾದರೂ, ಮನುಷ್ಯನ ಬದುಕಿನಲ್ಲಿ ಗೊಂದಲಗಳು ಮತ್ತು ಪ್ರಶ್ನೆಗಳು ಇರುವವರೆಗೂ ಕೃಷ್ಣನ ವ್ಯಕ್ತಿತ್ವದ ಕುರಿತು ಚರ್ಚೆ ನಡೆಯುತ್ತಲೇ ಇರುತ್ತದೆ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share