Monday, September 7, 2026
Join WhatsApp Group
HomeInformationSpecialದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬೇಕು ಸ್ನಾನ!

ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬೇಕು ಸ್ನಾನ!

ನಮ್ಮ ಕೈಯಲ್ಲೇ ಇದೆ ಖುಷಿಯ ರಿಮೋಟ್‌ ಕಂಟ್ರೋಲ್!‌

ಳಗ್ಗೆ ಎದ್ದು ಮುಖ ತೊಳೆದು, ಹಲ್ಲುಜ್ಜಿ, ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ಧರಿಸಿದರೆ ದಿನ ಶುರುವಾಯಿತು ಎನ್ನುವ ಭಾವನೆ ಬಹುತೇಕ ಎಲ್ಲರಿಗೂ ಇರುತ್ತದೆ. ಕೆಲವರಿಗೆ ಬೆಳಗಿನ ಸ್ನಾನವೇ ದಿನದ ಮೊದಲ ನೆಮ್ಮದಿ. ಇನ್ನು ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವವರೂ ಇದ್ದಾರೆ. ದೇಹದ ಮೇಲೆ ಅಂಟಿಕೊಂಡಿರುವ ಬೆವರು, ಧೂಳು, ಕೊಳೆ ಹೋಗಲಿ ಎಂಬ ಕಾರಣಕ್ಕೆ ನಾವು ಸ್ನಾನ ಮಾಡುತ್ತೇವೆ. ಆದರೆ, ದೇಹದ ಕೊಳೆ ತೊಳೆಯುವಂತೆಯೇ ಮನಸ್ಸಿನ ಕೊಳೆಯನ್ನೂ ಸ್ವಲ್ಪ ತೊಳೆದುಕೊಳ್ಳಬಹುದಲ್ಲವೇ?

ದೇಹಕ್ಕೆ ಕೊಳೆ ಅಂಟಿಕೊಳ್ಳುವುದು ಸುಲಭ. ಹೊರಗೆ ಹೋದರೆ ಧೂಳು, ಕೆಲಸ ಮಾಡಿದರೆ ಬೆವರು, ಮಣ್ಣಿನಲ್ಲಿ ಓಡಾಡಿದರೆ ಕೊಳೆ. ಕಣ್ಣಿಗೆ ಕಾಣುತ್ತದೆ. ಹಾಗಾಗಿ ಅದನ್ನು ತೊಳೆದುಕೊಳ್ಳಬೇಕು ಎಂಬುದು ನಮಗೆ ಗೊತ್ತು. ಸಾಬೂನು ಹಾಕಿ ನೀರು ಸುರಿದರೆ ದೇಹ ಮತ್ತೆ ತಾಜಾ. ಆದರೆ ಮನಸ್ಸಿನ ವಿಷಯ ಹಾಗಲ್ಲ. ಯಾರೋ ಹೇಳಿದ ಒಂದು ಮಾತು, ಯಾರೋ ಮಾಡಿದ ಅವಮಾನ, ನಮಗೆ ಸಿಗದ ಅವಕಾಶ, ಇನ್ನೊಬ್ಬರ ಯಶಸ್ಸು ನೋಡಿ ಹುಟ್ಟಿದ ಅಸೂಯೆ, ನಮ್ಮ ಮೇಲೆ ನಡೆದ ಅನ್ಯಾಯದ ಕೋಪ, ನಮ್ಮದೇ ತಪ್ಪಿನ ಪಶ್ಚಾತ್ತಾಪ, ನಾಳೆ ಏನಾಗುತ್ತದೋ ಎನ್ನುವ ಚಿಂತೆ… ಇವೆಲ್ಲವೂ ಮನಸ್ಸಿಗೆ ಅಂಟಿಕೊಳ್ಳುತ್ತವೆ. ಅವು ಕಾಣುವುದಿಲ್ಲ. ವಾಸನೆಯೂ ಬರುವುದಿಲ್ಲ. ಹಾಗಾಗಿ ಅವುಗಳನ್ನು ಹಾಗೆಯೇ ಹೊತ್ತುಕೊಂಡು ವರ್ಷಗಳವರೆಗೆ ಓಡಾಡುತ್ತೇವೆ!

ನಿನ್ನೆ ಯಾರೋ ನೋಯಿಸಿದ್ದಾರೆ. ಕೆಲಸದಲ್ಲಿ ಏನೋ ಭಾನಗಡಿ ಆಗಿದೆ. ಮನೆಯಲ್ಲೊಂದು ಮನಸ್ತಾಪವಾಗಿದೆ. ಇವೆಲ್ಲವನ್ನೂ ಬೆಳಗ್ಗೆ ಎದ್ದ ಕೂಡಲೇ ಮತ್ತೆ ತಲೆಯ ಮೇಲೆ ಹೊತ್ತುಕೊಂಡು ದಿನಕ್ಕೆ ಹೊರಡುವ ಅಗತ್ಯವಿದೆಯೇ?

ನಿನ್ನೆ ನಡೆದದ್ದನ್ನು ಮರೆತುಬಿಡುವುದು ಅಷ್ಟು ಸುಲಭವಲ್ಲ. ನಮ್ಮನ್ನು ನೋಯಿಸಿದವರನ್ನು ಕ್ಷಮಿಸುವುದೂ ಕೆಲವೊಮ್ಮೆ ಸುಲಭವಲ್ಲ. ಆದರೆ ಆ ಘಟನೆ ನಮ್ಮ ಇಡೀ ದಿನವನ್ನು, ಇಡೀ ಬದುಕನ್ನು ನಿಯಂತ್ರಿಸಲು ಬಿಡಬೇಕೋ ಬೇಡವೋ ಎಂಬುದನ್ನು ನಾವು ನಿರ್ಧರಿಸಬಹುದು. ಕ್ಷಮಿಸುವುದು ಎಂದರೆ ನಡೆದ ತಪ್ಪನ್ನು ಸರಿ ಎಂದು ಒಪ್ಪಿಕೊಳ್ಳುವುದಲ್ಲ. ನಮ್ಮ ಮನಸ್ಸಿನ ಮೇಲೆ ಆ ನೋವಿಗೆ ಶಾಶ್ವತ ಬಾಡಿಗೆ ಮನೆ ಕೊಡುವುದಿಲ್ಲ ಎಂಬ ನಿರ್ಧಾರ.

ಅದೇ ರೀತಿ, ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳುವುದು ಎಂದರೆ ಯಾವಾಗಲೂ ನಮ್ಮನ್ನೇ ಸರಿಯೆಂದು ಭಾವಿಸುವುದೂ ಅಲ್ಲ. ಕೆಲವೊಮ್ಮೆ ಕನ್ನಡಿಯ ಮುಂದೆ ನಿಂತು ಮುಖ ನೋಡಿಕೊಳ್ಳುವಂತೆ ಮನಸ್ಸಿನ ಮುಂದೆ ನಿಂತು ನಮ್ಮನ್ನೇ ನೋಡಿಕೊಳ್ಳಬೇಕಾಗುತ್ತದೆ. “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದೆಯೇ?”, “ನಾನು ಅನಗತ್ಯವಾಗಿ ಯಾರನ್ನಾದರೂ ನೋಯಿಸಿದ್ದೇನೆಯೇ?”, “ನನ್ನ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಬಹುದೇ?” ಎಂದು ನಮ್ಮನ್ನೇ ನಾವು ಕೇಳಿಕೊಳ್ಳಬೇಕು. ಇಂತಹ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಧೈರ್ಯವೂ ಮನಸ್ಸಿನ ಸ್ವಚ್ಛತೆಯ ಒಂದು ಭಾಗ.

ದೇಹವನ್ನು ಸ್ವಚ್ಛಗೊಳಿಸಲು ನೀರು ಮತ್ತು ಸಾಬೂನು ಸಾಕಾಗಬಹುದು. ಮನಸ್ಸನ್ನು ಸ್ವಚ್ಛಗೊಳಿಸಲು ಮಾತ್ರ ಬೇರೆ ವಸ್ತುಗಳು ಬೇಕಾಗುತ್ತವೆ. ಸ್ವಲ್ಪ ಒಳ್ಳೆಯ ಆಲೋಚನೆ, ಸ್ವಲ್ಪ ಪ್ರೀತಿ, ಸಾಧ್ಯವಾದಷ್ಟು ಕ್ಷಮಿಸುವ ಗುಣ, ತಪ್ಪಾದಾಗ “ಹೌದು, ಇದು ನನ್ನ ತಪ್ಪು” ಎಂದು ಹೇಳುವ ಧೈರ್ಯ ಮತ್ತು ಇನ್ನೊಬ್ಬರ ಜಾಗದಲ್ಲಿ ನಿಂತು ಯೋಚಿಸುವ ಮನಸ್ಸು. ಯಾರಾದರೂ ನಮ್ಮೊಂದಿಗೆ ಕಠಿಣವಾಗಿ ಮಾತನಾಡಿದಾಗ ತಕ್ಷಣ ಅದೇ ಕಠಿಣತೆಯಿಂದ ಉತ್ತರಿಸುವ ಬದಲು, “ಅವನ ಮನಸ್ಸಿನಲ್ಲೇನಿರಬಹುದು?” ಎಂದು ಒಂದು ಕ್ಷಣ ಯೋಚಿಸುವುದೂ ಮನಸ್ಸಿನ ಸ್ವಚ್ಛತೆಯೇ.

ನಮ್ಮ ಸಂತೋಷದ ರಿಮೋಟ್‌ ಕಂಟ್ರೋಲ್‌ ಅನ್ನು ಸಂಪೂರ್ಣವಾಗಿ ಇತರರ ಕೈಗೆ ಕೊಟ್ಟುಬಿಟ್ಟರೆ ನೆಮ್ಮದಿ ಸಿಗುವುದಿಲ್ಲ. ಯಾರಾದರೂ ಹೊಗಳಿದರೆ ಸಂತೋಷ, ಟೀಕಿಸಿದರೆ ಬೇಸರ, ಯಾರೋ ಕಡೆಗಣಿಸಿದರೆ ಕೋಪ, ಯಾರಿಗೋ ಯಶಸ್ಸು ಬಂದರೆ ಅಸೂಯೆ… ಹೀಗೆ ಪ್ರತಿಯೊಂದು ಮಾತನ್ನೂ ಮನಸ್ಸಿನೊಳಗೆ ಸಂಗ್ರಹಿಸುತ್ತಾ ಹೋದರೆ ಒಂದು ದಿನ ನಮ್ಮದೇ ಮನಸ್ಸು ತುಂಬಿಬಿಡುತ್ತದೆ. ಎಲ್ಲರನ್ನೂ ಮೆಚ್ಚಿಸುವುದು ಸಾಧ್ಯವಿಲ್ಲ. ಎಲ್ಲರೂ ನಮ್ಮ ಬಗ್ಗೆ ಒಳ್ಳೆಯದನ್ನೇ ಯೋಚಿಸಬೇಕು ಎನ್ನುವುದೂ ಸಾಧ್ಯವಿಲ್ಲ. ಹಾಗಿರುವಾಗ ಪ್ರತಿಯೊಬ್ಬರ ಮಾತಿಗೂ ನಮ್ಮ ನೆಮ್ಮದಿಯನ್ನು ಒಪ್ಪಿಸುವ ಅಗತ್ಯವೇನು?

ಕೆಲವೊಮ್ಮೆ ದೇಹದ ಆಯಾಸಕ್ಕಿಂತ ಮನಸ್ಸಿನ ಆಯಾಸವೇ ಹೆಚ್ಚು. ಹೊರಗೆ ನೋಡಲು ಎಲ್ಲವೂ ಸರಿಯಾಗಿರುತ್ತದೆ. ಮುಖದಲ್ಲಿ ನಗು ಇರುತ್ತದೆ. ಕೆಲಸವೂ ನಡೆಯುತ್ತದೆ. ಆದರೆ ಒಳಗೆ ಮಾತ್ರ ಯಾವುದೋ ಭಾರ. ಕಾರಣ ದೊಡ್ಡ ಸಮಸ್ಯೆಯಾಗಿರಬೇಕೆಂದಿಲ್ಲ. ವರ್ಷಗಳಿಂದ ಮನಸ್ಸಿನಲ್ಲಿ ಜಮೆಯಾಗಿರುವ ಸಣ್ಣ ಸಣ್ಣ ಬೇಸರಗಳೇ ಸಾಕು. ಅದಕ್ಕಾಗಿಯೇ ದೇಹಕ್ಕೆ ಪ್ರತಿದಿನ ಸ್ನಾನ ಬೇಕಾದಂತೆ ಮನಸ್ಸಿಗೂ ಪ್ರತಿದಿನ ಸ್ವಲ್ಪ ಸ್ವಚ್ಛತೆ ಬೇಕು.

ಹಾಗೆಂದರೆ ಪ್ರತಿದಿನ ದೊಡ್ಡ ಧ್ಯಾನ, ದೊಡ್ಡ ಸಂಕಲ್ಪ ಮಾಡಬೇಕು ಎಂದಲ್ಲ. ಬೆಳಗ್ಗೆ ಸ್ನಾನ ಮಾಡುವ ಕೆಲವು ನಿಮಿಷಗಳನ್ನೇ ಬಳಸಿಕೊಳ್ಳಬಹುದು. ತಲೆಯ ಮೇಲೆ ನೀರು ಬೀಳುವಾಗ, “ಇವತ್ತು ನಿನ್ನೆಗಿಂತ ಸ್ವಲ್ಪ ಚೆನ್ನಾಗಿ ಬದುಕೋಣ” ಎಂದುಕೊಳ್ಳಬಹುದು. ಕೋಪವಿದ್ದರೆ ಅದನ್ನು ದಿನವಿಡೀ ಹೊತ್ತುಕೊಂಡು ಹೋಗಬೇಕೇ ಎಂದು ಯೋಚಿಸಬಹುದು. ತಪ್ಪಾಗಿದ್ದರೆ ಸರಿಪಡಿಸಲು ಒಂದು ಹೆಜ್ಜೆ ಇಡಬಹುದು. ನಾಳೆಯ ಚಿಂತೆಯನ್ನು ಇವತ್ತಿನ ನೆಮ್ಮದಿಯನ್ನು ಕದಿಯಲು ಬಿಡಬಾರದು ಎಂದು ಮನಸ್ಸಿಗೆ ಹೇಳಿಕೊಳ್ಳಬಹುದು.

ಸ್ನಾನ ಮುಗಿದ ಮೇಲೆ ನಾವು ಹಳೆಯ ಬಟ್ಟೆ ಬಿಚ್ಚಿ ಹೊಸ ಬಟ್ಟೆ ತೊಡುತ್ತೇವೆ. ಅದೇ ರೀತಿ ಪ್ರತಿದಿನ ಹಳೆಯ ಬೇಸರವನ್ನೂ ಸ್ವಲ್ಪ ಬದಿಗಿಟ್ಟು ಹೊಸ ದಿನವನ್ನು ಎದುರಿಸಲು ಕಲಿಯಬೇಕು. ನಿನ್ನೆ ಮಾಡಿದ ತಪ್ಪಿನಿಂದ ಪಾಠ ತೆಗೆದುಕೊಳ್ಳೋಣ, ಯಾರಾದರೂ ನೋಯಿಸಿದ್ದರೆ ಎಚ್ಚರಿಕೆಯಿಂದ ಇರೋಣ, ಆದರೆ ಆ ನೋವನ್ನೇ ಮನಸ್ಸಿನ ಶಾಶ್ವತ ಸದಸ್ಯನಾಗಿ ಇರಿಸಿಕೊಳ್ಳುವುದು ಬೇಡ!

ಒಂದೇ ನೋವನ್ನು, ಒಂದೇ ಕೋಪವನ್ನು, ಒಂದೇ ಬೇಸರವನ್ನು ಹಿಡಿದುಕೊಂಡು ನಿಂತರೆ ಅದು ಒಳಗೇ ಕೊಳೆಯತೊಡಗುತ್ತದೆ. ಯೋಚನೆಗಳನ್ನು ಹರಿಯಲು ಬಿಡಬೇಕು. ಅಗತ್ಯವಿಲ್ಲದದ್ದನ್ನು ಬಿಟ್ಟು ಮುಂದೆ ಸಾಗಬೇಕು. ಸಾಧ್ಯವಾದಲ್ಲಿ ಕ್ಷಮಿಸಬೇಕು. ಸಾಧ್ಯವಾಗದಿದ್ದರೂ ಕನಿಷ್ಠ ಆ ನೋವಿನಿಂದ ನಮ್ಮ ಬದುಕು ನಿಯಂತ್ರಿತವಾಗದಂತೆ ನೋಡಿಕೊಳ್ಳಬೇಕು.

ಹೀಗಾಗಿ, ನಿನ್ನೆ ಯಾರೋ ಹೇಳಿದ ಮಾತನ್ನು ಅಲ್ಲಿಯೇ ಬಿಟ್ಟುಬಿಡೋಣ. ನಿನ್ನೆ ಮಾಡಿದ ತಪ್ಪಿನಿಂದ ಪಾಠ ಕಲಿಯೋಣ. ಯಾರ ಮೇಲಾದರೂ ಇರುವ ಕೋಪವನ್ನು ಸಾಧ್ಯವಾದಷ್ಟು ಕಡಿಮೆ ಮಾಡೋಣ. ನಾಳೆಯ ಚಿಂತೆಯನ್ನು ಇವತ್ತಿನ ಬೆಳಗ್ಗೆಯ ಮೇಲೆ ಹೇರುವುದನ್ನು ಬಿಡೋಣ. ಲೈಫ್‌ ಈಸ್‌ ಬ್ಯೂಟಿಫುಲ್‌ ಕಣ್ರಿ!

– ಸೌಪರ್ಣಿಕಾ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share