ಕಾರವಾರ: ಮಳೆಯಿಂದ ರಸ್ತೆಯಲ್ಲಿ ನಿಂತಿದ್ದ ನೀರನ್ನು ತಪ್ಪಿಸಲು ಏಕಾಏಕಿ ಬೈಕ್‌ನ್ನು ಬಲಕ್ಕೆ ತಿರುಗಿಸಿದ ಸವಾರನ ನಿರ್ಲಕ್ಷ್ಯದಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡ ಘಟನೆ ಕಾರವಾರ ತಾಲೂಕಿನ ಸದಾಶಿವಗಡ ಸಮೀಪದ ಮೆಸ್ತಾವಾಡಾ ರಸ್ತೆ ಕ್ರಾಸ್ ಬಳಿ ನಡೆದಿದೆ.
ಜುಲೈ 28ರಂದು ಸಂಜೆ 7.15ರ ಸುಮಾರಿಗೆ ಹಬ್ಬುವಾಡಾದ ನ್ಯೂ ಕೆಎಚ್‌ಬಿ ಕಾಲೋನಿಯ ನಿವಾಸಿ ಅಜಯ್ ಮಂಜುನಾಥ ವೆರ್ಣೆಕರ (36) ಅವರು ತಮ್ಮ ಬೈಕ್‌ನಲ್ಲಿ ಲಿಂಕ್ ರಸ್ತೆಯಿಂದ ಶಿವಾಜಿ ಚೌಕ್ ಕಡೆಗೆ ತೆರಳುತ್ತಿದ್ದರು.
ಆ ವೇಳೆ ರಾಜ್ಯ ಹೆದ್ದಾರಿ 34ರಲ್ಲಿ ಮಳೆಯ ನೀರು ರಸ್ತೆಯಲ್ಲಿ ನಿಂತಿದ್ದನ್ನು ಕಂಡು, ಏಕಾಏಕಿ ಬೈಕ್‌ನ್ನು ಬಲಭಾಗಕ್ಕೆ ತಿರುಗಿಸಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪುಷ್ಪಾ ಅಲಿಯಾಸ್ ಮಾಯಾ ಕಲ್ಗುಟಕರ (67) ಅವರನ್ನು ಗಮನಿಸದೇ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆಗೆ ಬಿದ್ದು ಎಡ ಕಣ್ಣಿನ ಬಳಿ ಗಾಯ ಹಾಗೂ ಎಡ ಕಾಲಿಗೆ ತೀವ್ರ ಒಳನೋವು ಉಂಟಾಗಿದೆ. ಬೈಕ್ ಸವಾರನೂ ವಾಹನ ಸಮೇತ ಕೆಳಗೆ ಬಿದ್ದು ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳು ಮಹಿಳೆಯನ್ನು ತಕ್ಷಣ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಕರಣದ ಬಗ್ಗೆ ಮಹಿಳೆಯ ಪತಿ ಶಾಂತಾರಾಮ ಕೋಯರ ತಾಮಸೆ (75) ಪೊಲೀಸರಿಗೆ ದೂರು ನೀಡಿದ್ದಾರೆ.