ಒಂದು ಉದ್ದನೆಯ ಬಟ್ಟೆ… ಆದರೆ ಅದರೊಳಗೆ ಸಾವಿರಾರು ವರ್ಷಗಳ ಇತಿಹಾಸ, ಲಕ್ಷಾಂತರ ನೇಕಾರರ ಬೆವರು, ಕೋಟ್ಯಂತರ ಮಹಿಳೆಯರ ಭಾವನೆಗಳು ಅಡಗಿವೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಗುರುತಿಸಿಕೊಂಡಿರುವ ಸೀರೆ, ಕಾಲದೊಂದಿಗೆ ಬದಲಾಗುತ್ತಾ ಬಂದರೂ ತನ್ನ ಅಸ್ತಿತ್ವವನ್ನು ಎಂದಿಗೂ ಕಳೆದುಕೊಂಡಿಲ್ಲ. ಇಂದು ವಿಶ್ವದ ಫ್ಯಾಷನ್ ವೇದಿಕೆಗಳಲ್ಲೂ ಮಿಂಚುತ್ತಿರುವ ಈ ಸೀರೆಯ ಪಯಣ ಎಲ್ಲಿಂದ ಆರಂಭವಾಯಿತು?
ಭಾರತೀಯ ಮಹಿಳೆಯರ ಉಡುಗೆ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಸೀರೆ. ಸರಳವಾಗಿ ಹೇಳುವುದಾದರೆ, ಸೀರೆ ಒಂದು ಉದ್ದನೆಯ ಬಟ್ಟೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸೀರೆ, ಅದರದೇ ಆದ ಬಣ್ಣ, ವಿನ್ಯಾಸ, ನೇಯ್ಗೆ ಮತ್ತು ಧರಿಸುವ ವಿಧಾನವಿದೆ. ಹೀಗಾಗಿ ಸೀರೆ ಎಂದರೆ ಕೇವಲ ಉಡುಗೆ ಮಾತ್ರವಲ್ಲ, ಅದು ಭಾರತದ ವೈವಿಧ್ಯತೆ, ಸಂಸ್ಕೃತಿ ಮತ್ತು ಕಲಾತ್ಮಕತೆಯ ಜೀವಂತ ಪ್ರತೀಕ.
ಸೀರೆಯ ವಿಶೇಷತೆ ಅದರ ಸರಳತೆಯಲ್ಲೇ ಅಡಗಿದೆ. ಸಾಮಾನ್ಯವಾಗಿ ಐದರಿಂದ ಒಂಬತ್ತು ಮೀಟರ್ ಉದ್ದದ ಒಂದೇ ಬಟ್ಟೆಯನ್ನು ದೇಹಕ್ಕೆ ಸುತ್ತಿಕೊಂಡು, ಅದರ ಒಂದು ತುದಿಯನ್ನು ಭುಜದ ಮೇಲೆ ಹಾಕಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಸೀರೆಯನ್ನು ಉಡುವ ವಿಧಾನ ಒಂದೇ ರೀತಿಯಲ್ಲ. ಪ್ರದೇಶ ಬದಲಾದಂತೆ ಉಡುವ ಶೈಲಿಯೂ ಬದಲಾಗುತ್ತದೆ.
ಮಹಾರಾಷ್ಟ್ರದ ನೌವಾರಿ ಸೀರೆಯಿಂದ ಕೇರಳದ ಕಸಾವು ಸೀರೆಯವರೆಗೆ, ಕರ್ನಾಟಕದ ಇಳಕಲ್ ಸೀರೆಯಿಂದ ತಮಿಳುನಾಡಿನ ಕಾಂಚೀಪುರಂ ರೇಷ್ಮೆಯವರೆಗೆ ಪ್ರತಿಯೊಂದು ಸೀರೆಯೂ ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟ್ಯವನ್ನು ಹೇಳುತ್ತದೆ.
ಸೀರೆಯ ಮತ್ತೊಂದು ದೊಡ್ಡ ವಿಶೇಷತೆ ಅದರ ತಯಾರಿಕೆಯಲ್ಲಿ ಕಾಣುವ ವೈವಿಧ್ಯ. ಹತ್ತಿ, ರೇಷ್ಮೆ, ಲಿನನ್ ಸೇರಿದಂತೆ ಹಲವು ಬಗೆಯ ನಾರುಗಳಿಂದ ಸೀರೆಗಳನ್ನು ತಯಾರಿಸಲಾಗುತ್ತದೆ. ಕೈಮಗ್ಗದಲ್ಲಿ ನೇಯುವ ಸೀರೆಗಳಿಗೆ ನೇಕಾರರ ಅಪಾರ ಕೈಚಳಕ ಮತ್ತು ಹಲವು ದಿನಗಳ ಶ್ರಮ ಬೇಕಾಗುತ್ತದೆ.
ಅದಕ್ಕಾಗಿಯೇ ಸೀರೆಯ ಬೆಲೆಯಲ್ಲೂ ದೊಡ್ಡ ವ್ಯತ್ಯಾಸ ಕಂಡುಬರುತ್ತದೆ. ಯಂತ್ರದಲ್ಲಿ ತಯಾರಾದ ಸರಳ ಸೀರೆಗಳು ಕಡಿಮೆ ಬೆಲೆಗೆ ದೊರೆಯಬಹುದು. ಕೈಮಗ್ಗದ ಸೀರೆಗಳಲ್ಲಿ ನೇಕಾರರ ಶ್ರಮ, ತಯಾರಿಕೆಗೆ ಬೇಕಾಗುವ ಸಮಯ ಮತ್ತು ವಿನ್ಯಾಸದ ಸಂಕೀರ್ಣತೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತದೆ.
ಉತ್ತಮ ಗುಣಮಟ್ಟದ ರೇಷ್ಮೆ, ನೈಜ ಜರಿ ಮತ್ತು ಸೂಕ್ಷ್ಮ ಕೈಕೆಲಸ ಇರುವ ಸೀರೆಗಳು ಲಕ್ಷಾಂತರ ರೂಪಾಯಿಗಳವರೆಗೂ ಬೆಲೆ ಹೊಂದಿರುವ ಉದಾಹರಣೆಗಳೂ ಇವೆ. ಹೀಗಾಗಿ ಸೀರೆ ಎಂದರೆ ಸಾಮಾನ್ಯ ದಿನನಿತ್ಯದ ಉಡುಗೆಯಿಂದ ಹಿಡಿದು ಕಲಾತ್ಮಕ ಪರಂಪರೆಯ ಅಮೂಲ್ಯ ಕೃತಿಯವರೆಗೆ ಹಲವು ರೂಪಗಳಲ್ಲಿ ಕಾಣಸಿಗುತ್ತದೆ.
ಕಾಲ ಬದಲಾದಂತೆ ಸೀರೆಯೂ ಹೊಸತನವನ್ನು ಅಳವಡಿಸಿಕೊಂಡಿದೆ. ಸಾಂಪ್ರದಾಯಿಕ ವಿನ್ಯಾಸಗಳ ಜೊತೆಗೆ ಹಗುರವಾದ ಬಟ್ಟೆಗಳು, ಆಧುನಿಕ ಮುದ್ರಣಗಳು, ಹೊಸ ಬ್ಲೌಸ್ ವಿನ್ಯಾಸಗಳು ಹಾಗೂ ವಿಭಿನ್ನ ಉಡುವ ಶೈಲಿಗಳು ಇಂದಿನ ಪೀಳಿಗೆಯಲ್ಲಿ ಜನಪ್ರಿಯವಾಗಿವೆ. ಉದ್ಯೋಗದಲ್ಲಿರುವ ಮಹಿಳೆಯರಿಂದ ಹಿಡಿದು ಕಾಲೇಜು ವಿದ್ಯಾರ್ಥಿನಿಯರು, ಕಲಾವಿದರು ಮತ್ತು ಫ್ಯಾಷನ್ ವಿನ್ಯಾಸಕರವರೆಗೆ ತಮ್ಮದೇ ಆದ ರೀತಿಯಲ್ಲಿ ಸೀರೆಯನ್ನು ಹೊಸ ರೂಪದಲ್ಲಿ ಪರಿಚಯಿಸುತ್ತಿದ್ದಾರೆ.
ಸೀರೆಯ ಪಯಣ ಭಾರತದಲ್ಲೇ ನಿಂತಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯಗಳ ಮೂಲಕ ಸೀರೆ ಜಾಗತಿಕ ಮಟ್ಟಕ್ಕೂ ತಲುಪಿದೆ. ಇಂದು ಅಂತರರಾಷ್ಟ್ರೀಯ ಫ್ಯಾಷನ್ ವೇದಿಕೆಗಳಲ್ಲೂ ಸೀರೆಯಿಂದ ಪ್ರೇರಿತವಾದ ವಿನ್ಯಾಸಗಳು ಕಾಣಿಸುತ್ತಿವೆ. ಭಾರತೀಯ ಸಾಂಸ್ಕೃತಿಕ ಉಡುಗೆಯಾಗಿ ಮಾತ್ರವಲ್ಲದೆ, ವಿಶ್ವ ಫ್ಯಾಷನ್ನಲ್ಲೂ ತನ್ನದೇ ಆದ ಸ್ಥಾನವನ್ನು ಅದು ನಿರ್ಮಿಸಿಕೊಂಡಿದೆ.
ಇದು ಕೇವಲ ಸೀರೆಯ ಕಥೆಯಲ್ಲ. ಇದರ ಹಿಂದೆ ನೂರಾರು ವರ್ಷಗಳ ನೇಕಾರಿಕೆಯ ಪರಂಪರೆ, ಅಸಂಖ್ಯಾತ ನೇಕಾರ ಕುಟುಂಬಗಳ ಬದುಕು ಮತ್ತು ಭಾರತದ ವಿವಿಧ ಪ್ರದೇಶಗಳ ಸಂಸ್ಕೃತಿಯ ಕಥೆಯೂ ಇದೆ.
ಇಲ್ಲಿಂದ ಆರಂಭವಾಗುತ್ತದೆ ನಮ್ಮ ʻಸೀರೆಯ ಪಯಣʼ. ಮುಂದಿನ ಸಂಚಿಕೆಯಲ್ಲಿ ಕರ್ನಾಟಕದ ಹೆಮ್ಮೆಯ ಇಳಕಲ್, ಮೈಸೂರು ರೇಷ್ಮೆ, ಮೊಳಕಾಲ್ಮೂರು ಸೇರಿದಂತೆ ರಾಜ್ಯದ ವೈಶಿಷ್ಟ್ಯಪೂರ್ಣ ಸೀರೆಗಳ ರೋಚಕ ಇತಿಹಾಸ, ನೇಯ್ಗೆಯ ವೈಶಿಷ್ಟ್ಯ ಮತ್ತು ಅವುಗಳ ಹಿಂದಿರುವ ನೇಕಾರರ ಬದುಕಿನ ಕಥೆಗಳ ಲೋಕಕ್ಕೆ ಹೆಜ್ಜೆ ಇಡೋಣ.