ಶಿರಸಿ: ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಯೋಗಪಟು ನಂದನ್ ನರಸಿಂಹ ಭಟ್ ಅವರಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ವೈಯಕ್ತಿಕವಾಗಿ ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, ನಂದನ್ ಭಟ್ ಆಧ್ಯಾತ್ಮಿಕ ಯೋಗ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಯುವಕರು ಇಂತಹ ಸಾಧನೆ ಮಾಡುತ್ತಿರುವುದನ್ನು ನೋಡುವುದು ಸಂತಸದ ವಿಚಾರ. ಉತ್ತರ ಕನ್ನಡ ಜಿಲ್ಲೆಯ ಸ್ಪರ್ಧಿಗಳು ರಾಜ್ಯದ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಿರುವುದು ಹೆಮ್ಮೆಯ ವಿಷಯ. ಸೆಪ್ಟೆಂಬರ್ 4ರಿಂದ 9ರವರೆಗೆ ನಡೆಯಲಿರುವ ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸ್ಪರ್ಧಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.
ನಂದನ್ ನರಸಿಂಹ ಭಟ್ ಮಾತನಾಡಿ, ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಳಿಕ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಚಾಂಪಿಯನ್ ಆಗಿದ್ದು, ಅದರ ಫಲವಾಗಿ ಈಗ ಏಷ್ಯಾ ಫೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ಸಂಗತಿ.
ಕಳೆದ ನಾಲ್ಕು ವರ್ಷಗಳಿಂದ ನಿರಂತರ ಯೋಗಾಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ ಅವರು, ತಮ್ಮ ಸಾಧನೆಗೆ ತಂದೆ-ತಾಯಿ ನೀಡಿರುವ ಬೆಂಬಲವೇ ಪ್ರಮುಖ ಕಾರಣ. ಮುಂದಿನ ದಿನಗಳಲ್ಲಿ ಬಿ.ಎಸ್‌ಸಿ ಯೋಗ ಅಧ್ಯಯನ ಮಾಡಿ ಇದೇ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಆಸೆ ಇದೆ ಎಂದು ಹೇಳಿದರು.