ಸಾರ್ವಜನಿಕರಿಗೆ ನಿತ್ಯ 5 ಕಿ.ಮೀ ಸುತ್ತಿ ಸಂಚರಿಸುವ ಶಿಕ್ಷೆ!
ಹೊನ್ನಾವರ: ತಾಲೂಕಿನ ಅನಿಲಗೋಡ್ ಭಾಗದ ಸುಮಾರು 150ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಪ್ರತಿನಿತ್ಯ ಅವಲಂಬಿಸಿಕೊಂಡಿದ್ದ ಕಾಲುಸೇತುವೆ ಮಳೆಗಾಲದಲ್ಲಿ ಕುಸಿದು ಬಿದ್ದು ಸುಮಾರು ಎರಡು ವರ್ಷಗಳು ಕಳೆದರೂ ಅದರ ಮರುನಿರ್ಮಾಣವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸೇತುವೆ ಅನಿಲಗೋಡ್ ಗ್ರಾಮಸ್ಥರಿಗೆ ಮಾತ್ರವಲ್ಲದೆ ಹೆಗ್ಗಾರ, ಹೊನ್ನಾವರ ಹಾಗೂ ಬಳಕೂರ ಕಡೆಗೆ ಸಂಚರಿಸುವ ಸುಮಾರು 200ಕ್ಕೂ ಹೆಚ್ಚು ಜನರಿಗೆ ಅತ್ಯಂತ ಪ್ರಮುಖ ಸಂಪರ್ಕವಾಗಿತ್ತು.
ಸೇತುವೆ ಕುಸಿದ ನಂತರ ಗ್ರಾಮಸ್ಥರು ಕನಿಷ್ಠ 5 ಕಿಲೋಮೀಟರ್ ಸುತ್ತುವರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮಸ್ಥರು ಈ ಸಮಸ್ಯೆ ಕುರಿತು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮಾಜಿ ಸಚಿವರು, ಹಾಲಿ ಶಾಸಕರಾದ ಮಂಕಾಳ ವೈದ್ಯ ಅವರಿಗೂ ಈ ಕುರಿತು ಅನೇಕ ಮನವಿಗಳನ್ನು ಸಲ್ಲಿಸಲಾಗಿತ್ತು. ಅಲ್ಲದೆ ಹೊನ್ನಾವರದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮಗಳಲ್ಲಿಯೂ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಮನವಿಗಳ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು. ಆದಾಗ್ಯೂ, ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜನರ ಸಂಕಷ್ಟಗಳನ್ನು ಅರಿತು ಪರಿಹಾರ ನೀಡಬೇಕಾದ ವ್ಯವಸ್ಥೆ ಕೇವಲ ಭರವಸೆಗಳ ಮಟ್ಟದಲ್ಲೇ ಉಳಿದರೆ, ಜನಸಂದರ್ಶನಗಳ ಉದ್ದೇಶವೇ ಪ್ರಶ್ನಾರ್ಥಕವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಸೇತುವೆ ಕುಸಿದ ಪರಿಣಾಮ ಅನಿಲಗೋಡ್ನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಈ ಭಾಗದಿಂದ ಬೆಳಿಗ್ಗೆ 6 ಗಂಟೆಗೆ ಒಂದೇ ಒಂದು ಬಸ್ ಸಂಚರಿಸುವ ಕಾರಣ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ಆರಂಭವಾಗುವುದಕ್ಕಿಂತ ಸುಮಾರು ಎರಡು ಗಂಟೆಗಳ ಮುಂಚಿತವಾಗಿಯೇ ತೆರಳಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಸಚಿವರಾಗಿದ್ದ ಅವಧಿಯಲ್ಲೇ ಈ ಸೇತುವೆಯನ್ನು ನಿರ್ಮಿಸಿದ್ದರೆ ಇಂದು ನೂರಾರು ಕುಟುಂಬಗಳು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಅನಾರೋಗ್ಯ ಪೀಡಿತರು ಈ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಸಾರ್ವಜನಿಕರ ಅಗತ್ಯಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ಜನಹಿತದ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅನಿಲಗೋಡ್ ಕಾಲುಸೇತುವೆಯ ಮರುನಿರ್ಮಾಣ ಕಾಮಗಾರಿಗೆ ತುರ್ತು ಆದ್ಯತೆ ನೀಡಿ ಗ್ರಾಮಸ್ಥರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಾದೇವಿ ಡಿ. ಅಂಬಿಗ, ದಾಮೋದರ ಡಿ. ಅಂಬಿಗ, ಗಜಾನನ ಎನ್. ನಾಯ್ಕ, ನರಸಿಂಹ ನಾಯ್ಕ, ಜನಾರ್ಧನ ನಾಯ್ಕ, ಸುರೇಶ್ ನಾಯ್ಕ, ಮಾದೇವ ನಾಯ್ಕ, ಮಂಜು ನಾಯ್ಕ, ನಾರಾಯಣ ನಾಯ್ಕ, ವಿಷ್ಣು ನಾಯ್ಕ, ಕುಸುಮಾ ಅಂಬಿಗ, ಮುಕ್ತಾ ನಾಯ್ಕ, ಸುಶೀಲಾ ನಾಯ್ಕ, ಭಾಗೀರಥಿ ನಾಯ್ಕ ಸೇರಿದಂತೆ ಹಲವು ಗ್ರಾಮಸ್ಥರು ಒತ್ತಾಯಿಸಿದ್ದಾರೆ.