ನಾವು ದಿನಕ್ಕೆ ಎಷ್ಟು ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತೇವೆ ಎಂಬುದನ್ನೇ ಬಹುಶಃ ಲೆಕ್ಕ ಹಾಕುವುದಿಲ್ಲ. ಅಂಗಡಿಯಲ್ಲಿ ಹಣ ಪಾವತಿಸುವಾಗ, ರೆಸ್ಟೋರೆಂಟ್‌ನಲ್ಲಿ ಮೆನು ನೋಡುವಾಗ, ಯಾವುದಾದರೂ ಕಾರ್ಯಕ್ರಮದ ಲೊಕೇಶನ್ ಪಡೆಯುವಾಗ, ಗೂಗಲ್ ಮ್ಯಾಪ್ ಅಥವಾ ಮೀಟ್ ಲಿಂಕ್ ಹಂಚಿಕೊಳ್ಳುವಾಗ… ಹೀಗೆ ನಮ್ಮ ಸುತ್ತಮುತ್ತ ಎಲ್ಲೆಡೆ ಕಾಣಸಿಗುವ ಆ ಕಪ್ಪು-ಬಿಳುಪಿನ ಚೌಕಾಕಾರದ ಪೆಟ್ಟಿಗೆಗಳು ಈಗ ನಮ್ಮ ಡಿಜಿಟಲ್ ಬದುಕಿನ ಅವಿಭಾಜ್ಯ ಭಾಗವಾಗಿಬಿಟ್ಟಿವೆ.
ಆದರೆ, ನೋಡಲು ಇಷ್ಟು ಸರಳವಾಗಿರುವ ಈ ಚಿಕ್ಕ ಚೌಕದೊಳಗೆ ಇಷ್ಟೊಂದು ಮಾಹಿತಿ ಹೇಗೆ ಅಡಗಿರುತ್ತದೆ? ಮೊದಲಿಗೆ ಕ್ಯೂಆರ್ ಎಂದರೇನು? Quick Response ಎಂಬುದರ ಸಂಕ್ಷಿಪ್ತ ರೂಪವೇ QR. ಅಂದರೆ, ವೇಗವಾಗಿ ಮಾಹಿತಿಯನ್ನು ಓದಲು ಸಾಧ್ಯವಾಗುವ ಕೋಡ್. ಆದರೆ ಇದರ ಹುಟ್ಟು ಸಾಮಾನ್ಯ ಡಿಜಿಟಲ್ ಪಾವತಿಗಾಗಿ ಆಗಿರಲಿಲ್ಲ. ಇದರ ಕಥೆ ಶುರುವಾಗಿದ್ದು ಜಪಾನ್‌ನ ಕಾರ್ಖಾನೆಯೊಂದರಲ್ಲಿ!
1990ರ ದಶಕದಲ್ಲಿ ಜಪಾನ್‌ನ ವಾಹನ ಉದ್ಯಮದಲ್ಲಿ ಬಿಡಿಭಾಗಗಳ ಸಂಖ್ಯೆಯನ್ನು ಗುರುತಿಸಲು ಬಾರ್‌ಕೋಡ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಬಾರ್‌ಕೋಡ್‌ಗಳಿಗೆ ಒಂದು ದೊಡ್ಡ ಸಮಸ್ಯೆ ಇತ್ತು. ಅವುಗಳಲ್ಲಿ ಸಂಗ್ರಹಿಸಬಹುದಾದ ಮಾಹಿತಿ ಸೀಮಿತವಾಗಿತ್ತು. ಜೊತೆಗೆ ಒಂದೇ ದಿಕ್ಕಿನಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತಿತ್ತು. ವಾಹನ ಬಿಡಿಭಾಗಗಳ ಸಂಖ್ಯೆ ಹೆಚ್ಚಿದಂತೆ, ಇನ್ನಷ್ಟು ಮಾಹಿತಿಯನ್ನು ವೇಗವಾಗಿ ಸಂಗ್ರಹಿಸಿ ಓದಬಲ್ಲ ಹೊಸ ವ್ಯವಸ್ಥೆಯ ಅಗತ್ಯವೂ ಎದುರಾಯಿತು.
ಇಲ್ಲಿಯೇ ಪ್ರವೇಶಿಸುತ್ತಾರೆ ಜಪಾನಿನ ಇಂಜಿನಿಯರ್ ಮಸಾಹಿರೊ ಹರಾ.
ಟೊಯೊಟಾ ಸಮೂಹದ ಅಂಗಸಂಸ್ಥೆಯಾದ ಡೆನ್ಸೊದಲ್ಲಿ ಕೆಲಸ ಮಾಡುತ್ತಿದ್ದ ಹರಾ ಅವರಿಗೆ ಹೊಸ ರೀತಿಯ ಕೋಡ್ ಅಭಿವೃದ್ಧಿಪಡಿಸುವ ಜವಾಬ್ದಾರಿ ಸಿಕ್ಕಿತು. ಸಾಮಾನ್ಯ ಬಾರ್‌ಕೋಡ್‌ನಂತೆ ಒಂದೇ ಸಾಲಿನಲ್ಲಿ ಮಾಹಿತಿಯನ್ನು ತುಂಬುವ ಬದಲು, ಮಾಹಿತಿಯನ್ನು ಎರಡು ಆಯಾಮಗಳಲ್ಲಿ ಜೋಡಿಸಿದರೆ ಹೇಗೆ ಎಂಬ ಆಲೋಚನೆ ಮೂಡಿತು. ಚೌಕಾಕಾರದ ಗ್ರಿಡ್‌ನಲ್ಲಿ ಕಪ್ಪು-ಬಿಳುಪು ಗುರುತುಗಳನ್ನು ಜೋಡಿಸುವ ಜಪಾನಿನ ಜನಪ್ರಿಯ ‘ಗೋ’ ಆಟವೂ ಅವರ ಚಿಂತನೆಗೆ ಪ್ರೇರಣೆಯಾಗಿತ್ತು.
ಹಲವು ಪ್ರಯೋಗಗಳ ಬಳಿಕ 1994ರಲ್ಲಿ ಹರಾ ನೇತೃತ್ವದ ಡೆನ್ಸೊ ತಂಡ QR ಕೋಡ್ ಅಭಿವೃದ್ಧಿಪಡಿಸಿತು. ಸಾಂಪ್ರದಾಯಿಕ ಬಾರ್‌ಕೋಡ್‌ಗಿಂತ ಇದು ಬಹಳಷ್ಟು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಲ್ಲದು. ಅದರ ಮೂರು ಮೂಲೆಗಳಲ್ಲಿ ಕಾಣುವ ದೊಡ್ಡ ಚೌಕಾಕಾರದ ಗುರುತುಗಳೇ ಸ್ಕ್ಯಾನರ್‌ಗೆ ಕೋಡ್‌ನ ಸ್ಥಾನ ಮತ್ತು ದಿಕ್ಕನ್ನು ಗುರುತಿಸಲು ನೆರವಾಗುತ್ತವೆ. ಅದಕ್ಕಾಗಿಯೇ ಕೋಡ್ ಅನ್ನು ಯಾವ ದಿಕ್ಕಿನಿಂದ ಸ್ಕ್ಯಾನ್ ಮಾಡಿದರೂ ಮಾಹಿತಿಯನ್ನು ಓದಲು ಸಾಧ್ಯವಾಗುತ್ತದೆ.
ಡೆನ್ಸೊ ವೇವ್ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಅವಕಾಶ ನೀಡಿತು. ಪೇಟೆಂಟ್ ಹಕ್ಕುಗಳಿದ್ದರೂ, ಸಾಮಾನ್ಯ ಬಳಕೆಗೆ QR ಕೋಡ್‌ಗಳನ್ನು ಮುಕ್ತವಾಗಿ ಬಳಸಲು ಅವಕಾಶ ನೀಡಿದ್ದರಿಂದ ಅದರ ಜಾಗತಿಕ ಬಳಕೆ ವೇಗವಾಗಿ ವಿಸ್ತರಿಸಿತು.
ಆರಂಭದಲ್ಲಿ QR ಕೋಡ್‌ಗಳ ಬಳಕೆ ಮುಖ್ಯವಾಗಿ ಕಾರ್ಖಾನೆಗಳಲ್ಲಿ ವಾಹನ ಬಿಡಿಭಾಗಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳ ಯುಗ ಆರಂಭವಾದ ಮೇಲೆ ಈ ಕಪ್ಪು-ಬಿಳುಪಿನ ಚೌಕ ಜಗತ್ತಿನಾದ್ಯಂತ ಹರಡಿತು. ಇಂದು ಅದು ಡಿಜಿಟಲ್ ಪಾವತಿ, ಟಿಕೆಟ್, ಉತ್ಪನ್ನದ ಮಾಹಿತಿ, ವೆಬ್‌ಸೈಟ್, ಅಪ್ಲಿಕೇಶನ್, ಲೊಕೇಶನ್ ಸೇರಿದಂತೆ ಅಸಂಖ್ಯಾತ ಕೆಲಸಗಳಿಗೆ ಬಳಕೆಯಾಗುತ್ತಿದೆ.
ಅಂದರೆ, ಅಂಗಡಿಯೊಂದರಲ್ಲಿ ನೀವು ಯಾವುದಾದರೂ ಉತ್ಪನ್ನದ ಪ್ಯಾಕೆಟ್ ಮೇಲಿರುವ QR ಕೋಡ್ ಸ್ಕ್ಯಾನ್ ಮಾಡಿದಾಗ ಅದರೊಳಗೆ ಕೇವಲ ‘ಒಂದು ಲಿಂಕ್’ ಮಾತ್ರ ಇರಬೇಕೆಂದಿಲ್ಲ. ಉತ್ಪನ್ನಕ್ಕೆ ಸಂಬಂಧಿಸಿದ ಗುರುತು, ವೆಬ್ ವಿಳಾಸ, ಸಂಪರ್ಕ ಮಾಹಿತಿ ಅಥವಾ ಇತರ ಡಿಜಿಟಲ್ ಮಾಹಿತಿಯನ್ನು ಅದರಲ್ಲಿ ಸಂಕೇತ ರೂಪದಲ್ಲಿ ಇರಿಸಬಹುದು.
ಹಾಗಾಗಿ ಮುಂದಿನ ಬಾರಿ ಆ ಕಪ್ಪು-ಬಿಳುಪಿನ ಚೌಕದ ಮೇಲೆ ಮೊಬೈಲ್ ಕ್ಯಾಮೆರಾ ಹಿಡಿದಾಗ, ಒಂದಿಷ್ಟು ಯೋಚಿಸಿ ನೋಡಿ, ಬೆಂಕಿಪೆಟ್ಟಿಗೆಯಷ್ಟು ಜಾಗದಲ್ಲಿರುವ ಈ ಪುಟ್ಟ ಪೆಟ್ಟಿಗೆಯೊಳಗೆ ತಂತ್ರಜ್ಞಾನದ ಒಂದು ದೊಡ್ಡ ಕಥೆಯೇ ಅಡಗಿದೆ! ಅದೆಷ್ಟು ಸರಳವೆಂದರೆ, ಇಲ್ಲೇ ಕೆಳಗೆಕೊಟ್ಟಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ನಮ್ಮ ಕೆನರಾ ನೆಕ್ಸ್ಟ್ ವಾಟ್ಸಪ್ ಗ್ರೂಪ್ ಕೂಡ ಸೇರಬಹುದು!