Monday, September 7, 2026
Join WhatsApp Group
HomeCrimeಅರಬೈಲ ಘಟ್ಟದ ಗಟಾರದಲ್ಲಿ ಅಪರಿಚಿತ ಶವ!

ಅರಬೈಲ ಘಟ್ಟದ ಗಟಾರದಲ್ಲಿ ಅಪರಿಚಿತ ಶವ!

ಕೊಲೆಯ ಶಂಕೆ; ಸುಳಿವು ಬೆನ್ನತ್ತಿದ ಯಲ್ಲಾಪುರ ಪೊಲೀಸರು

ಯಲ್ಲಾಪುರ: ಅರಬೈಲ ಘಟ್ಟದ ತಿರುವುಗಳಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿದ್ದವು. ಬೆಳಗಿನ ಹೊತ್ತಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ರಸ್ತೆ ಬದಿಯ ಗಟಾರದಲ್ಲಿ ಏನೋ ಬಿದ್ದಿರುವುದು ಕಣ್ಣಿಗೆ ಬಿದ್ದಿದೆ. ಮೊದಲಿಗೆ ಯಾವುದೋ ವಸ್ತು ಇರಬಹುದು ಎಂದುಕೊಂಡಿದ್ದರೂ, ಹತ್ತಿರ ಹೋಗಿ ನೋಡಿದಾಗ ಕಂಡಿದ್ದು ಅಪರಿಚಿತ ವ್ಯಕ್ತಿಯ ಮೃತದೇಹ! ದೇಹದ ಮೇಲಿನ ಗಾಯದ ಗುರುತುಗಳು ಇದು ಸಹಜ ಸಾವು ಅಲ್ಲ, ಕೊಲೆಯೇ ಇರಬಹುದು ಎಂಬ ಅನುಮಾನಕ್ಕೆ ಕಾರಣವಾಗಿವೆ.

ತಾಲೂಕಿನ ಮೂಲೆಪಾಲ ವ್ಯಾಪ್ತಿಯ ಅರಬೈಲ ಘಟ್ಟದ ಡಾಂಬರು ರಸ್ತೆಯ ಪಕ್ಕದ ನೀರಿನ ಗಟಾರದಲ್ಲಿ ಗುರುವಾರ ಬೆಳಗ್ಗೆ ಈ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಗುರುತು ಈವರೆಗೆ ಪತ್ತೆಯಾಗಿಲ್ಲ. ಅಂದಾಜು 22ರಿಂದ 26 ವರ್ಷ ವಯಸ್ಸಿನ ಯುವಕ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡ್ಲಗದ್ದೆ ನಿವಾಸಿ, ಕೂಲಿ ಕಾರ್ಮಿಕ ರವಿ ಕೃಷ್ಣ ಸಿದ್ದಿ ನಾಯ್ಕ ಅವರು ಅಂಗಡಿಬೈಲ್ ಕಡೆಯಿಂದ ಯಲ್ಲಾಪುರಕ್ಕೆ ಬಸ್‌ನಲ್ಲಿ ಬರುತ್ತಿದ್ದಾಗ ರಸ್ತೆ ಬದಿಯ ಗಟಾರದಲ್ಲಿ ವ್ಯಕ್ತಿಯೊಬ್ಬ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಸ್‌ನಿಂದ ಇಳಿದು ಸ್ಥಳಕ್ಕೆ ತೆರಳಿ ನೋಡಿದಾಗ ವ್ಯಕ್ತಿ ಬಲಮಗ್ಗುಲಾಗಿ ಬಿದ್ದಿರುವುದು ಕಂಡುಬಂದಿದೆ. ಉಸಿರಾಟವೂ ಇಲ್ಲದಿರುವುದು ಗಮನಕ್ಕೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದರೆ ಪೊಲೀಸರನ್ನು ಬೆಚ್ಚಿಬೀಳಿಸಿದ್ದು ಮೃತದೇಹದ ಮೇಲಿದ್ದ ಗಾಯಗಳ ಗುರುತುಗಳು. ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಚರ್ಮ ಕಿತ್ತುಹೋದ ಗುರುತುಗಳು, ಹೊಟ್ಟೆಯ ಎಡಭಾಗದಲ್ಲಿ ರಕ್ತಗಾಯಗಳು ಕಂಡುಬಂದಿವೆ. ಯಾವುದೋ ಹರಿತವಾದ ವಸ್ತುವಿನಿಂದ ಹೊಡೆದ ಅಥವಾ ಚುಚ್ಚಿದ ರೀತಿಯ ಗಾಯಗಳಿರುವುದು ಕಂಡುಬಂದಿದೆ. ಮೂಗಿನಿಂದ ರಕ್ತಸ್ರಾವವಾಗಿದ್ದು, ಎಡ ಪಕ್ಕೆಲುಬಿನ ಭಾಗದಲ್ಲಿಯೂ ಗಾಯ ಹಾಗೂ ಬಾಸುಂಡೆಯ ಗುರುತುಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಆ.12ರ ರಾತ್ರಿಯಿಂದ ಆ.13ರ ಬೆಳಗ್ಗೆ 8.45ರೊಳಗಿನ ಅವಧಿಯಲ್ಲಿ ಯಾವುದೋ ಸ್ಥಳದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರಬಹುದು. ಬಳಿಕ ಗುರುತು ಪತ್ತೆಯಾಗದಂತೆ ಮೃತದೇಹವನ್ನು ಅರಬೈಲ ಘಟ್ಟದ ರಸ್ತೆ ಬದಿಯ ಗಟಾರಕ್ಕೆ ತಂದು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚುವುದರ ಜತೆಗೆ ಕೊಲೆಯ ಹಿಂದಿರುವ ಕಾರಣ ಮತ್ತು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಅರಬೈಲ ಘಟ್ಟದ ನಿರ್ಜನ ರಸ್ತೆ ಬದಿಯಲ್ಲಿ ಪತ್ತೆಯಾದ ಈ ಅಪರಿಚಿತ ಶವ ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಪೊಲೀಸರ ತನಿಖೆಯತ್ತ ಎಲ್ಲರ ಗಮನ ನೆಟ್ಟಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share