ಶಿರಸಿ: ಶಿರಸಿ ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಶಿರಸಿ ನಗರ ಪೊಲೀಸರು ಭೇದಿಸಿದ್ದು, ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿ ಸುಮಾರು 50 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಂಧಿತರನ್ನು ಶಿವಮೊಗ್ಗದ ಮಲ್ಲಿಗೇನಹಳ್ಳಿ ನಿವಾಸಿ ಸುಶೀಲಾ ಕೋಂ ಸುರೇಶ್ (39) ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ನಿವಾಸಿ ಸಾಯಿಲಕ್ಷ್ಮಿ ಕೋಂ ಪ್ರಭುದಾಸ (36) ಎಂದು ಗುರುತಿಸಲಾಗಿದೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಶಿರಸಿ ಸೆಂಟ್ರಲ್ ಬಸ್‌ಸ್ಟ್ಯಾಂಡ್‌ನಲ್ಲಿ ಫಿರ್ಯಾದಿಯ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು, ಅದರೊಳಗಿನ ಬಾಕ್ಸ್‌ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ನಾಣ್ಯವನ್ನು ಕಳ್ಳತನ ಮಾಡಲಾಗಿತ್ತು.
ಕಳವಾದ ಸ್ವತ್ತಿನಲ್ಲಿ ಸುಮಾರು 18 ಗ್ರಾಂ ತೂಕದ ಚಿನ್ನದ ಶಾರ್ಟ್ ನಕ್ಲೆಸ್, 30 ಗ್ರಾಂ ತೂಕದ ಉದ್ದನೆಯ ಹಾರ, 2 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 10 ಗ್ರಾಂ ತೂಕದ ಬೆಳ್ಳಿ ನಾಣ್ಯ ಸೇರಿದ್ದು, ಒಟ್ಟು ಸುಮಾರು ₹3.52 ಲಕ್ಷ ಮೌಲ್ಯ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.ಪ್ರಕರಣದ ಪತ್ತೆಗಾಗಿ ಮೇಲಾಧಿಕಾರಿಗಳ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿತ್ತು.
ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿದೆ. ಅಂತಿಮವಾಗಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು ಆ.13ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 50 ಗ್ರಾಂ ತೂಕದ, ಅಂದಾಜು ₹5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಶಿರಸಿ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಈ.ಸಿ. ಅವರ ಮಾರ್ಗದರ್ಶನದಲ್ಲಿ ನಡೆದಿದೆ.
ಶಿರಸಿ ನಗರ ಠಾಣೆಯ ಪಿಎಸ್‌ಐ ನರಸಿಂಹಲು ಟಿ. (ಎಲ್‌ಒ) ಹಾಗೂ ತನಿಖಾ ಪಿಎಸ್‌ಐ ನಾರಾಯಣ ರಾಠೋಡ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಸವರಾಜ ಹಗರಿ, ಕೋಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ರಾಜು ಎಂ., ಹನುಮಂತ ಕಬಾಡಿ, ಚನ್ನಬಸಪ್ಪ ಹಾಗೂ ಶೋಭಾ ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ ಕದಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣದ ಪತ್ತೆಗೆ ಶ್ರಮಿಸಿದ ಶಿರಸಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.