ಶಿರಸಿ: ಬೊಲೆರೋ ವಾಹನ ಹಾಗೂ ಪಲ್ಸರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ 66 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಗಾಂವ ಗ್ರಾಮದ ದಿಬ್ಬಣಕೇರಿ ಸಮೀಪ ನಡೆದಿದೆ.
ಮಳಲಗಾಂವ ಗ್ರಾಮದ ತಿಮ್ಮಪ್ಪ ಬಸವಣ್ಣಿ ನಾಯ್ಕ (66) ಗಾಯಗೊಂಡವರು. ಆ.12ರಂದು ಸಂಜೆ ಈ ಘಟನೆ ನಡೆದಿದ್ದು, ತಿಮ್ಮಪ್ಪ ನಾಯ್ಕ ಅವರು ತಮ್ಮ ಮಗ ಪುನೀತ್ ಚಲಾಯಿಸುತ್ತಿದ್ದ ಪಲ್ಸರ್ ಬೈಕ್‌ನಲ್ಲಿ ಮಳಲಗಾಂವದಿಂದ ಬಿಸಿಲುಕೊಪ್ಪ ಕಡೆಗೆ ತೆರಳುತ್ತಿದ್ದರು. ದಿಬ್ಬಣಕೇರಿ ಸಮೀಪ ಎದುರಿನಿಂದ ಬಂದ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಬೊಲೆರೋ ವಾಹನವನ್ನು ಹುತ್ತಗಾರ ಗ್ರಾಮದ ಜಯವಂತ ಜಟ್ಟಿ ಮುಕ್ರಿ (42) ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ತಿಮ್ಮಪ್ಪ ನಾಯ್ಕ ರಸ್ತೆಗೆ ಬಿದ್ದು, ಬಲಗಾಲಿನ ಬೆರಳುಗಳ ಬಳಿ ಗಂಭೀರ ಸ್ವರೂಪದ ರಕ್ತಗಾಯವಾಗಿದೆ. ತಕ್ಷಣ ಬೊಲೆರೋ ಚಾಲಕ ಜಯವಂತ ಹಾಗೂ ಮನಿಷ್ ಸುರೇಶ ನಾಯ್ಕ ಅವರು ಗಾಯಾಳುವನ್ನು ಉಪಚರಿಸಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ವೆಲ್‌ನೆಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಪುನೀತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೊಲೆರೋ ಚಾಲಕ ಜಯವಂತ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ.