Monday, September 7, 2026
Join WhatsApp Group
HomeLocal Newsಹೈಕೋರ್ಟ್ ಪೀಠಕ್ಕಾಗಿ ಪಕ್ಷಾತೀತವಾಗಿ ಒಟ್ಟಾಗೋಣ

ಹೈಕೋರ್ಟ್ ಪೀಠಕ್ಕಾಗಿ ಪಕ್ಷಾತೀತವಾಗಿ ಒಟ್ಟಾಗೋಣ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯನ್ನು, ಅದರಲ್ಲೂ ಘಟ್ಟದ ಮೇಲಿನ ತಾಲೂಕುಗಳನ್ನು ಪ್ರಸ್ತುತ ಇರುವ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಿಂದ ಹೊರಗಿಟ್ಟು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ನಾಗರಿಕ ವೇದಿಕೆ, ಹೈಕೋರ್ಟ್ ಪೀಠದ ವಿಚಾರದಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದೆ.

ಈ ಕುರಿತು ನಾಗರಿಕ ವೇದಿಕೆ ಯಲ್ಲಾಪುರದ ಅಧ್ಯಕ್ಷ ರಾಮು ನಾಯ್ಕ ಹಾಗೂ ಸರ್ವ ಸದಸ್ಯರು ಪ್ರಕಟಣೆ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಪೀಠದಿಂದ ತಪ್ಪಿಸಿ ಸುಮಾರು 300 ಕಿ.ಮೀ. ದೂರದಲ್ಲಿರುವ ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಬಾರದು ಎಂಬ ಬೇಡಿಕೆಯನ್ನು ಮೂರು ತಿಂಗಳ ಹಿಂದೆಯೇ ವೇದಿಕೆ ಮೂಲಕ ವ್ಯಕ್ತಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಸಂಬಂಧ ತಹಶೀಲ್ದಾರರಿಂದ ಜಿಲ್ಲಾಧಿಕಾರಿಗಳವರೆಗೆ, ಸ್ಥಳೀಯ ಶಾಸಕರಿಂದ ಜಿಲ್ಲಾ ಉಸ್ತುವಾರಿ ಸಚಿವರವರೆಗೆ, ಸಂಸದರು ಹಾಗೂ ವಕೀಲರ ಸಂಘಗಳಿಗೂ ಅಂಕಿ-ಅಂಶಗಳ ಸಹಿತ ಮನವಿ ಸಲ್ಲಿಸಲಾಗಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ಜಿಲ್ಲೆಯ ಆಗುಹೋಗುಗಳ ಬಗ್ಗೆ ಕಳಕಳಿ ಹೊಂದಿರುವ ಜಿಲ್ಲೆಯ ನೂರಕ್ಕೂ ಹೆಚ್ಚು ಚಿಂತಕರಿಗೆ ವಾಟ್ಸ್‌ಆ್ಯಪ್ ಮೂಲಕ ವಿಷಯದ ಕುರಿತು ಗಮನ ಸೆಳೆಯಲಾಗಿತ್ತು. ಜೂನ್ ತಿಂಗಳಲ್ಲಿ ಕರಪತ್ರ ವಿತರಣೆ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಿಗೂ ಈ ವಿಚಾರದ ಬಗ್ಗೆ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗಿತ್ತು ಎಂದು ವೇದಿಕೆ ತಿಳಿಸಿದೆ.

ನಾಗರಿಕ ವೇದಿಕೆ ಸೇರಿದಂತೆ ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಸಾಧಕರು ಹಾಗೂ ಸಂಘಟನೆಗಳು ನಡೆಸಿದ ಪ್ರಯತ್ನದ ಪರಿಣಾಮವಾಗಿ ಇದೀಗ ಉತ್ತರ ಕನ್ನಡ ಜಿಲ್ಲೆಯ ಧ್ವನಿ ರಾಜ್ಯ ಮಟ್ಟದಲ್ಲಿ ಕೇಳಿಸತೊಡಗಿದೆ. ಜನಪ್ರತಿನಿಧಿಗಳೂ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದ್ದಾರೆ.

ನೂತನ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದಾದರೆ ಅದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಆಗಬೇಕು. ಅಲ್ಲಿಯವರೆಗೆ ನಮ್ಮ ಜಿಲ್ಲೆಯನ್ನು ಈಗಿರುವಂತೆ ಧಾರವಾಡ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಬಾರದು ಎಂಬುದು ಜಿಲ್ಲೆಯ ಜನಸಾಮಾನ್ಯರ ಪ್ರಮುಖ ಬೇಡಿಕೆಯಾಗಿದೆ ಎಂದು ನಾಗರಿಕ ವೇದಿಕೆ ಹೇಳಿದೆ.

ಜಿಲ್ಲೆಯ ಜನರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವಿದೆ. ಪಕ್ಕದ ಜಿಲ್ಲೆಯ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳು, ಯುವ ಮಂಡಳಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳು ಒಟ್ಟಾಗಿ ಕೈಜೋಡಿಸಿ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ವೇದಿಕೆ ಮನವಿ ಮಾಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share