Monday, September 7, 2026
Join WhatsApp Group
HomeLocal Newsಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆ ತಕ್ಷಣ ಸರಿಪಡಿಸಿ

ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆ ತಕ್ಷಣ ಸರಿಪಡಿಸಿ

ಅಧಿಕಾರಿಗಳಿಗೆ ಸಂಸದ ಕಾಗೇರಿ ಕಟ್ಟುನಿಟ್ಟಿನ ಸೂಚನೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,  ನೆಟ್‌ವರ್ಕ್ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸುವಂತೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಿರಸಿಯ ತಮ್ಮ ಸಂಸದರ ಕಾರ್ಯಾಲಯದಲ್ಲಿ ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಜಿಲ್ಲೆಯ ನೆಟ್‌ವರ್ಕ್ ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಿದರು. ಸಭೆಯಲ್ಲಿ ಬಿಎಸ್‌ಎನ್‌ಎಲ್‌ ಮಂಗಳೂರು ವಿಭಾಗದ ಮಹಾಪ್ರಬಂಧಕ ಹೇಮಂತ್ ಸದಾಶಿವ್, ಕಾರವಾರ ವಿಭಾಗದ ಉಪ ಮಹಾಪ್ರಬಂಧಕ ಮಲ್ಲಿಕಾರ್ಜುನ್ ತಾಳಿಕೋಟಿ ಸೇರಿದಂತೆ ಪ್ರಮುಖ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ 4G ಸ್ಯಾಚುರೇಶನ್ ಯೋಜನೆ ಅಡಿ ಜಿಲ್ಲೆಯಲ್ಲಿ ಎದುರಾಗಿದ್ದ ಹಲವು ಅಡೆತಡೆಗಳನ್ನು ನಿವಾರಿಸಿ ಈಗಾಗಲೇ 200ಕ್ಕೂ ಹೆಚ್ಚು ನೂತನ ಟವರ್‌ಗಳು ಕಾರ್ಯಾರಂಭಿಸಲು ಅಗತ್ಯ ಸಹಕಾರ ನೀಡಲಾಗಿದೆ ಎಂದು ಕಾಗೇರಿ ತಿಳಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಹೊಸ ಬಿಎಸ್‌ಎನ್‌ಎಲ್‌ ಟವರ್‌ಗಳಿಗೆ ಮಂಜೂರಾತಿ ದೊರೆತಿರುವುದನ್ನು ಅವರು ಪ್ರಸ್ತಾಪಿಸಿದರು.

ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರು ಹಾಗೂ ಬಿಎಸ್‌ಎನ್‌ಎಲ್‌ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯ ನೆಟ್‌ವರ್ಕ್ ಸಮಸ್ಯೆಗಳ ಕುರಿತು ಚರ್ಚಿಸಲಾಗಿತ್ತು. ಇದರ ಪರಿಣಾಮವಾಗಿ ನೆಟ್‌ವರ್ಕ್ ರಹಿತ ಗ್ರಾಮಗಳನ್ನು ಗುರುತಿಸಿ ಸಮಗ್ರ ಸರ್ವೆ ನಡೆಸಲು ಹಾಗೂ ಅಗತ್ಯವಿರುವ ಪ್ರದೇಶಗಳಲ್ಲಿ ಹೊಸ ಟವರ್‌ಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಕೇಂದ್ರದಿಂದ ಸೂಚನೆ ದೊರೆತಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸಂಪರ್ಕ ರಹಿತ ಪ್ರದೇಶಗಳನ್ನು ಅಧಿಕಾರಿಗಳು ತಕ್ಷಣ ಗುರುತಿಸಬೇಕು. ಯಾವುದೇ ವಿಳಂಬ ಮಾಡದೆ ಸಮಗ್ರ ಸರ್ವೆ ನಡೆಸಿ ಹೊಸ ಟವರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಬೇಕು ಎಂದು ಕಾಗೇರಿ ಸೂಚಿಸಿದರು.

ಇನ್ನು ಜಿಲ್ಲೆಯ ಕೆಲವು ಭಾಗಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಟವರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಸಮಸ್ಯೆಗಳನ್ನು ಪರಿಹರಿಸಿ ನೆಟ್‌ವರ್ಕ್ ಸೇವೆಯನ್ನು ಸುಸ್ಥಿತಿಗೆ ತರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯದಲ್ಲೇ ಅತಿ ಹೆಚ್ಚು ಬಿಎಸ್‌ಎನ್‌ಎಲ್‌ ಟವರ್‌ಗಳು ನಮ್ಮ ಜಿಲ್ಲೆಯಲ್ಲಿವೆ. ಗ್ರಾಮೀಣ ಹಾಗೂ ಮಲೆನಾಡು ಭಾಗದ ಬಹುತೇಕ ನಾಗರಿಕರು ಬಿಎಸ್‌ಎನ್‌ಎಲ್‌ ಸೇವೆಯನ್ನು ಅವಲಂಬಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ, ಆಡಳಿತ ಹಾಗೂ ಆರ್ಥಿಕ ವಹಿವಾಟು ಸೇರಿದಂತೆ ಪ್ರತಿಯೊಂದು ಕಾರ್ಯಕ್ಕೂ ಮೊಬೈಲ್ ಸಂಪರ್ಕ ಅತ್ಯಗತ್ಯ. ಜನರಿಗೆ ಯಾವುದೇ ಅಡಚಣೆಯಿಲ್ಲದೆ ಗುಣಮಟ್ಟದ ಸೇವೆ ಒದಗಿಸುವುದು ಇಲಾಖೆಯ ಕರ್ತವ್ಯ ಎಂದು ಕಾಗೇರಿ ಹೇಳಿದರು.

ಜಿಲ್ಲೆಯ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ದುರ್ಗಮ ಪ್ರದೇಶಗಳಲ್ಲಿ ಎದುರಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗಳಿಗೆ ವಿಶೇಷ ಆದ್ಯತೆ ನೀಡಬೇಕು. ಜಿಲ್ಲೆಯಾದ್ಯಂತ ನೆಟ್‌ವರ್ಕ್ ಸ್ಥಿರತೆ ಕಾಪಾಡಲು ಕೈಗೊಂಡ ಕ್ರಮಗಳ ಕುರಿತು ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share