ಮುರುಡೇಶ್ವರ: ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳರು ಕದ್ದೊಯ್ದಿರುವ ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿ ಜನತಾ ಕಾಲೋನಿಯಲ್ಲಿ ನಡೆದಿದೆ.
ತೆರ್ನಮಕ್ಕಿಯ ಈಶ್ವರ ಈರಾ ನಾಯ್ಕ (50) ಸ್ಕೂಟಿ ಕಳೆದುಕೊಂಡವರು. ಅವರು 2018ರಲ್ಲಿ ಖರೀದಿಸಿದ್ದ ಹೋಂಡಾ ಸ್ಕೂಟಿ (KA-47/U-6936)ಯನ್ನು ಮನೆಯ ಕೆಲಸಗಳಿಗೆ ಬಳಸುತ್ತಿದ್ದರು. ಎಂದಿನಂತೆ ಸ್ಕೂಟಿಯನ್ನು ಮನೆಯ ಶೆಡ್‌ನಲ್ಲಿ ನಿಲ್ಲಿಸಲಾಗಿತ್ತು.
ಗೃಹಪ್ರವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಶ್ವರ ಅವರು ಪತ್ನಿ ಹಾಗೂ ಹಿರಿಯ ಮಗನೊಂದಿಗೆ ಆ.10ರಂದು ಬೆಳಿಗ್ಗೆ ಮೂಡಶಿರಾಲಿಗೆ ತೆರಳಿದ್ದರು. ಕಿರಿಯ ಮಗ ನಾಗೇಂದ್ರ ನಾಯ್ಕ ಮನೆಯಲ್ಲಿ ಉಳಿದಿದ್ದರು. ಮರುದಿನ ಆ.11ರಂದು ಬೆಳಿಗ್ಗೆ 11ರ ಸುಮಾರಿಗೆ ನಾಗೇಂದ್ರ ಕೂಡ ಸ್ಕೂಟಿಯನ್ನು ಮನೆಯ ಶೆಡ್‌ನಲ್ಲಿ ನಿಲ್ಲಿಸಿ ಮೂಡಶಿರಾಲಿಗೆ ತೆರಳಿದ್ದಾರೆ.
ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಮರಳಿ ಬಂದಾಗ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿ ನಾಪತ್ತೆಯಾಗಿತ್ತು. ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದರೂ ಸ್ಕೂಟಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.