Monday, September 7, 2026
Join WhatsApp Group
HomeCrimeಮತ್ತೆ ದೂರು ಕೊಟ್ಟರೆ ಶರಾವತಿಗೆ ಎಸೆದುಬಿಡುತ್ತೇವೆ!

ಮತ್ತೆ ದೂರು ಕೊಟ್ಟರೆ ಶರಾವತಿಗೆ ಎಸೆದುಬಿಡುತ್ತೇವೆ!

ಬೋಟಿಂಗ್‌ ವಿಚಾರದಲ್ಲಿ ಮಹಿಳೆಗೆ ಬೆದರಿಕೆ | ದೂರು ದಾಖಲು

ಹೊನ್ನಾವರ: ಬೋಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ, ‘ಮತ್ತೆ ದೂರು ನೀಡಿದರೆ ಕೊಂದು ಶರಾವತಿ ನದಿಗೆ ಎಸೆದು ನಾಪತ್ತೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿರುವ ಆರೋಪ ಹೊನ್ನಾವರದಲ್ಲಿ ಕೇಳಿಬಂದಿದೆ.

ಮಾವಿನಕುರ್ವಾ ಮಠದಕೇರಿ ನಿವಾಸಿ ಚಂದ್ರಕಲಾ ತಿಮ್ಮಪ್ಪ ಗೌಡ ಅವರು ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಗಲಾಟೆ?

ಆರೋಪಿತರು ಈ ಹಿಂದೆ ಹೊನ್ನಾವರ ತಾರಿಬಾಗಿಲು ಬಳಿ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದರು. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೋಟಿಂಗ್‌ಗೆ ನಿಷೇಧ ಹೇರಿದ ಬಳಿಕವೂ ಮಾವಿನಕುರ್ವಾ ಮಠದಕೇರಿ ಭಾಗದಿಂದ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದರು.

ಈ ವಿಚಾರವನ್ನು ಯಾರೋ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಆದರೆ ಮಾಹಿತಿ ನೀಡುತ್ತಿರುವವರು ಚಂದ್ರಕಲಾ ಅವರೇ ಎಂದು ಆರೋಪಿತರು ಭಾವಿಸಿದ್ದರು. ಚಂದ್ರಕಲಾ ಅವರು ಹೊನ್ನಾವರ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್‌ಗೆ ಬೋಟಿಂಗ್ ಕುರಿತು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಆ.16ರಂದು ಅವರ ಮನೆಯ ಬಳಿ ಬಂದು ಜಗಳ ಮಾಡಿದ್ದರು ಎನ್ನಲಾಗಿದೆ.

ಈ ಕುರಿತು ಚಂದ್ರಕಲಾ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಾದ ಆರೋಪಿತರು ಎರಡು ದಿನಗಳ ಬಳಿಕ ಮತ್ತೆ ಎದುರಾಗಿದ್ದಾರೆ.

ದಾರಿ ಮಧ್ಯೆಯೇ ಅಡ್ಡಗಟ್ಟಿ ಬೆದರಿಕೆ

ಆ.18ರಂದು ಬೆಳಿಗ್ಗೆ ಸುಮಾರು 9 ಗಂಟೆ. ಚಂದ್ರಕಲಾ ಅವರು ಮನೆಯ ಹಿಂಬದಿಯ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಾಲ್ವರು ಅಲ್ಲಿಗೆ ಬಂದು ಅವರನ್ನು ಅಡ್ಡಗಟ್ಟಿ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅವಾಚ್ಯವಾಗಿ ನಿಂದಿಸಿದ ಆರೋಪಿತರು, ‘ಇನ್ನೊಮ್ಮೆ ನಮ್ಮ ವಿರುದ್ಧ ದೂರು ನೀಡಿದರೆ ಕೊಂದು ಶರಾವತಿ ನದಿಗೆ ಎಸೆದು ನಾಪತ್ತೆ ಮಾಡುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಕಲಾ ತಿಳಿಸಿದ್ದಾರೆ.

ಘಟನೆಯ ಬಳಿಕ ಚಂದ್ರಕಲಾ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಈ ಸಂಬಂಧ ಹನುಮಂತ ಕೆರಿಯಾ ಗೌಡ, ಚಂದ್ರಹಾಸ ಧರ್ಮಾ ಗೌಡ, ಗಣೇಶ ಕೇಶ ಗೌಡ ಹಾಗೂ ಮೋಹನ ತಿಮ್ಮಪ್ಪ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಬೋಟಿಂಗ್ ವಿಚಾರದಿಂದ ಆರಂಭವಾದ ವಿವಾದ ಇದೀಗ ಮಹಿಳೆಗೆ ಜೀವ ಬೆದರಿಕೆ ಆರೋಪದವರೆಗೆ ತಲುಪಿದ್ದು, ಪ್ರಕರಣದ ಕುರಿತು ಹೊನ್ನಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share