ಕಾರವಾರ: ಹಳಿಯಾಳ ತಾಲೂಕಿನ ಕೇರವಾಡದಲ್ಲಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಅಭಿವೃದ್ಧಿ ಹಾಗೂ ಬೃಹತ್ ದುರಸ್ತಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಧರ್ತಿ ಆಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ (DA-JGUA) ಯೋಜನೆಯಡಿ ₹75 ಲಕ್ಷ ಅನುದಾನ ಮಂಜೂರಾಗಿ ಬಿಡುಗಡೆಯಾಗಿದೆ ಎಂದು ಕಾರವಾರ ಸಂಸದರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದಿಂದ ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಶಾಲೆಯ ತರಗತಿ ಕೊಠಡಿಗಳು, ಶೌಚಾಲಯಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿಯ ವಸತಿ ಗೃಹಗಳ ಬೃಹತ್ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಬುಡಕಟ್ಟು ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಸ್ತುವಾರಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ನಾಲ್ಕು ತಿಂಗಳ ಕಾಲಮಿತಿಯೊಳಗೆ ಪಾರದರ್ಶಕತೆ ಹಾಗೂ ಉನ್ನತ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಿರ್ಮಾಣ ಏಜೆನ್ಸಿಗೆ ಸೂಚಿಸಲಾಗಿದೆ ಎಂದು ಸಂಸದರ ಕಾರ್ಯಾಲಯ ತಿಳಿಸಿದೆ.