ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಗೆ ಅರ್ಜಿ ಆಹ್ವಾನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಮುಂಡಗೋಡ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧೋದ್ದೇಶ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಈ ನೇಮಕಾತಿ ನಡೆಯಲಿದ್ದು, ಹೊನ್ನಾವರ ತಾಲೂಕಿನ ಹೊಸಾಕುಳಿ, ನಗರಬಸ್ತಿಕೇರಿ, ಭಟ್ಕಳ ತಾಲೂಕಿನ ಬೆಳಕೆ, ಶಿರಸಿ ತಾಲೂಕಿನ ಬೈರುಂಬೆ, ಸಿದ್ದಾಪುರ ತಾಲೂಕಿನ ಹೆಗ್ಗರಣೆ, ಯಲ್ಲಾಪುರ ತಾಲೂಕಿನ ಮದನೂರು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಳಗಿ, ಹುನಗುಂದ ಹಾಗೂ ಜೋಯಿಡಾ ತಾಲೂಕಿನ ಅಖೇತಿ, ಆವೇಡಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇವೆ. ಮುಂಡಗೋಡ ತಾಲೂಕು ಪಂಚಾಯಿತಿಯಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಯೂ ಖಾಲಿ ಇದೆ.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸುವವರು ಶೇ.40ರಷ್ಟು ವಿಕಲಚೇತನರಾಗಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ನಿವಾಸಿಗಳಾಗಿರಬೇಕು. 18ರಿಂದ 45 ವರ್ಷದೊಳಗಿನ ವಯೋಮಿತಿ ಹೊಂದಿದ್ದು, ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.
ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಶೇ.40ರಷ್ಟು ವಿಕಲಚೇತನರಾಗಿದ್ದು, ಸಂಬಂಧಿಸಿದ ತಾಲೂಕು ವ್ಯಾಪ್ತಿಯ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ. 18ರಿಂದ 45 ವರ್ಷದೊಳಗಿನ ವಯೋಮಿತಿ ಹಾಗೂ ಪದವಿ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಆಯಾ ತಾಲೂಕು ಪಂಚಾಯಿತಿ ಅಥವಾ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ಭರ್ತಿ ಮಾಡಿಕೊಳ್ಳಬಹುದು. ಸೆಪ್ಟೆಂಬರ್ 19ರೊಳಗೆ ಅರ್ಜಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ 08382-200758 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ತಿಳಿಸಿದ್ದಾರೆ.