Monday, September 7, 2026
Join WhatsApp Group
HomeAgricultureಅಡಿಕೆ ಬೆಳೆ; ವಿಸ್ತೀರ್ಣ ಹೆಚ್ಚಿದರೂ ಇಳಿಯುತ್ತಿದೆ ಉತ್ಪಾದನೆ

ಅಡಿಕೆ ಬೆಳೆ; ವಿಸ್ತೀರ್ಣ ಹೆಚ್ಚಿದರೂ ಇಳಿಯುತ್ತಿದೆ ಉತ್ಪಾದನೆ

ನವದೆಹಲಿ: ಅಡಿಕೆ ಬೆಳೆಯುವ ಜಾಗ ಹೆಚ್ಚುತ್ತಿದೆ ಎಂದರೆ ಅಡಿಕೆ ಉತ್ಪಾದನೆಯೂ ಹೆಚ್ಚಬೇಕು. ಸಾಮಾನ್ಯವಾಗಿ ಇದೇ ಲೆಕ್ಕ. ಆದರೆ ಕರ್ನಾಟಕದ ಅಡಿಕೆ ಕೃಷಿಯ ಇತ್ತೀಚಿನ ಅಂಕಿ-ಅಂಶಗಳು ಈ ಸರಳ ಲೆಕ್ಕವನ್ನೇ ತಲೆಕೆಳಗಾಗಿಸಿವೆ. ಐದು ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ಸುಮಾರು ಶೇ.30ರಷ್ಟು ಹೆಚ್ಚಾಗಿದೆ. ಆದರೆ, ಉತ್ಪಾದನೆ ಮಾತ್ರ ಶೇ.15ರಷ್ಟು ಕಡಿಮೆಯಾಗಿದೆ. ಇನ್ನು ಒಂದು ಹೆಕ್ಟೇರ್ ಜಾಗದಲ್ಲಿ ಸಿಗುತ್ತಿದ್ದ ಅಡಿಕೆಯ ಪ್ರಮಾಣದಲ್ಲಿ ಸುಮಾರು ಶೇ.35ರಷ್ಟು ಇಳಿಕೆಯಾಗಿದೆ.

ದೇಶದ ಅಡಿಕೆ ಕೃಷಿಯಲ್ಲಿ ಕರ್ನಾಟಕದ ಸ್ಥಾನವೇನು ಎಂಬುದನ್ನು ನೋಡಿದರೆ ಈ ಅಂಕಿ-ಅಂಶಗಳ ಗಂಭೀರತೆ ಅರ್ಥವಾಗುತ್ತದೆ. ದೇಶದ ಒಟ್ಟು ಅಡಿಕೆ ಕೃಷಿ ಪ್ರದೇಶದ ಶೇ.71.56ರಷ್ಟು ಕರ್ನಾಟಕದಲ್ಲಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲೂ ರಾಜ್ಯದ ಪಾಲು ಶೇ.75.47ರಷ್ಟಿದೆ. ಹೀಗಿರುವಾಗ ರಾಜ್ಯದ ಉತ್ಪಾದಕತೆಯಲ್ಲಿನ ಬದಲಾವಣೆ ಅಡಿಕೆ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

2021-22ರಲ್ಲಿ ಕರ್ನಾಟಕದಲ್ಲಿ 6.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. ಆಗ 13.48 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಆದರೆ 2025-26ಕ್ಕೆ ಅಡಿಕೆ ಕೃಷಿಯ ವಿಸ್ತೀರ್ಣ 7.98 ಲಕ್ಷ ಹೆಕ್ಟೇರ್‌ಗೆ ಏರಿದೆ. ಅಂದರೆ, ಸುಮಾರು 1.95 ಲಕ್ಷ ಹೆಕ್ಟೇರ್ ಪ್ರದೇಶ ಹೊಸದಾಗಿ ಅಡಿಕೆ ಕೃಷಿಗೆ ಬಂದಿದೆ.

ಆದರೆ ಉತ್ಪಾದನೆಯ ಲೆಕ್ಕ ಮಾತ್ರ ಅದಕ್ಕೆ ತಕ್ಕಂತೆ ಏರಿಲ್ಲ. 13.48 ಲಕ್ಷ ಟನ್ ಇದ್ದ ಉತ್ಪಾದನೆ 11.32 ಲಕ್ಷ ಟನ್‌ಗೆ ಇಳಿದಿದೆ. ಈ ಕುಸಿತ ಒಂದೇ ವರ್ಷದಲ್ಲಿ ಸಂಭವಿಸಿದ್ದಲ್ಲ. 2022-23ರಲ್ಲಿ 6.74 ಲಕ್ಷ ಹೆಕ್ಟೇರ್ ಪ್ರದೇಶದಿಂದ 10.24 ಲಕ್ಷ ಟನ್ ಉತ್ಪಾದನೆಯಾಗಿತ್ತು. 2023-24ರಲ್ಲಿ 6.76 ಲಕ್ಷ ಹೆಕ್ಟೇರ್ ಪ್ರದೇಶದಿಂದ 10.32 ಲಕ್ಷ ಟನ್ ಉತ್ಪಾದನೆಯಾಯಿತು.

2024-25ರಲ್ಲಿ ಅಡಿಕೆ ಪ್ರದೇಶ 7.41 ಲಕ್ಷ ಹೆಕ್ಟೇರ್‌ಗೆ ಏರಿದರೂ ಉತ್ಪಾದನೆ 10.97 ಲಕ್ಷ ಟನ್‌ನಷ್ಟಿತ್ತು. 2025-26ರಲ್ಲಿ ಪ್ರದೇಶ 7.98 ಲಕ್ಷ ಹೆಕ್ಟೇರ್‌ಗೆ ತಲುಪಿದಾಗ ಉತ್ಪಾದನೆ 11.32 ಲಕ್ಷ ಟನ್ ಆಗಿದೆ.

ಈ ಅಂಕಿ-ಅಂಶಗಳು ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ನೀಡಿದ ಲಿಖಿತ ಉತ್ತರ.

ಇನ್ನು ಜಿಲ್ಲೆಗಳ ಲೆಕ್ಕ ನೋಡಿದರೆ, ರಾಜ್ಯದ ಅಡಿಕೆ ಬೆಳೆಗಾರರ ಆತಂಕಕ್ಕೆ ಮತ್ತಷ್ಟು ಕಾರಣಗಳು ಕಾಣಿಸುತ್ತವೆ. ರಾಜ್ಯದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ಶಿವಮೊಗ್ಗದಲ್ಲಿ 2021-22ರಲ್ಲಿ 1.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.37 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಐದು ವರ್ಷಗಳ ಬಳಿಕ ಪ್ರದೇಶ 1.34 ಲಕ್ಷ ಹೆಕ್ಟೇರ್‌ಗೆ ಏರಿದೆ. ಆದರೆ ಉತ್ಪಾದನೆ 1.49 ಲಕ್ಷ ಟನ್‌ಗೆ ಇಳಿದಿದೆ. ಅಂದರೆ, ವಿಸ್ತೀರ್ಣ ಹೆಚ್ಚಾದರೂ ಉತ್ಪಾದನೆ 88 ಸಾವಿರ ಟನ್‌ನಷ್ಟು ಕಡಿಮೆಯಾಗಿದೆ.

ದಕ್ಷಿಣ ಕನ್ನಡದಲ್ಲೂ ಚಿತ್ರಣ ಭಿನ್ನವಾಗಿಲ್ಲ. 2021-22ರಲ್ಲಿ 1.01 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.74 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಹೆಕ್ಟೇರ್‌ಗೆ 2.70 ಟನ್ ಉತ್ಪಾದಕತೆ ಇತ್ತು. 2025-26ರಲ್ಲಿ ಪ್ರದೇಶ 1.07 ಲಕ್ಷ ಹೆಕ್ಟೇರ್‌ಗೆ ಏರಿದರೂ ಉತ್ಪಾದನೆ 1.41 ಲಕ್ಷ ಟನ್‌ಗೆ ಇಳಿದಿದೆ. ಉತ್ಪಾದಕತೆಯಲ್ಲೂ ಭಾರಿ ಕುಸಿತವಾಗಿದೆ. ತುಮಕೂರು, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ.

ಆದರೆ, ಚಿಕ್ಕಮಗಳೂರು ಮಾತ್ರ ಈ ಲೆಕ್ಕಾಚಾರಕ್ಕೆ ಅಪವಾದವಾಗಿದೆ. ಇಲ್ಲಿ ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಿದಂತೆ ಉತ್ಪಾದನೆಯೂ ಹೆಚ್ಚಾಗಿದೆ. 2021-22ರಲ್ಲಿ ಸುಮಾರು 72 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 92 ಸಾವಿರ ಟನ್ ಅಡಿಕೆ ಉತ್ಪಾದನೆಯಾಗಿತ್ತು. ಹೆಕ್ಟೇರ್‌ಗೆ 1.27 ಟನ್ ಉತ್ಪಾದಕತೆ ಇತ್ತು. 2025-26ರಲ್ಲಿ ಪ್ರದೇಶ ಸುಮಾರು 1 ಲಕ್ಷ ಹೆಕ್ಟೇರ್‌ಗೆ ಏರಿದ್ದು, ಉತ್ಪಾದನೆ 1.67 ಲಕ್ಷ ಟನ್‌ಗೆ ತಲುಪಿದೆ. ಉತ್ಪಾದಕತೆಯೂ ಹೆಕ್ಟೇರ್‌ಗೆ 1.67 ಟನ್‌ಗೆ ಹೆಚ್ಚಾಗಿದೆ.

ಹಾಗಾದರೆ ಅಡಿಕೆ ಕೃಷಿಯ ವಿಸ್ತೀರ್ಣ ಹೆಚ್ಚುತ್ತಿದ್ದರೂ ಉತ್ಪಾದನೆ ಏಕೆ ಇಳಿಯುತ್ತಿದೆ? ಈ ಪ್ರಶ್ನೆಗೆ ಕೇವಲ ಒಂದೇ ಕಾರಣವನ್ನು ಹೇಳಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯ, ನೀರಿನ ಲಭ್ಯತೆ, ರೋಗ-ಕೀಟಬಾಧೆ, ಮಣ್ಣಿನ ಗುಣಮಟ್ಟ ಸೇರಿದಂತೆ ಹಲವು ಅಂಶಗಳು ಅಡಿಕೆ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಕಾರಣ ಏನೇ ಇರಲಿ, ಕರ್ನಾಟಕದ ಅಡಿಕೆ ಕೃಷಿಯ ಮುಂದಿರುವ ಸವಾಲು ಈಗ ಹೊಸ ತೋಟಗಳನ್ನು ಹೆಚ್ಚಿಸುವುದಕ್ಕಿಂತ ಇರುವ ತೋಟಗಳ ಉತ್ಪಾದಕತೆಯನ್ನು ಉಳಿಸಿಕೊಳ್ಳುವುದಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share