‘ಹೊಂಡ ಭಾಗ್ಯ’ದ ವಿರುದ್ಧ ಬಿಜೆಪಿ ರಸ್ತೆ ತಡೆ: ವಾರದೊಳಗೆ ಹೊಂಡ ಮುಚ್ಚುವ ಭರವಸೆ
ಯಲ್ಲಾಪುರ: ಶಿರಸಿ–ಯಲ್ಲಾಪುರ ಮುಖ್ಯ ರಸ್ತೆ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಂಪ್ಲಿ ಹಾಗೂ ಹಾಸಣಗಿ ಶಕ್ತಿ ಕೇಂದ್ರಗಳ ವತಿಯಿಂದ ಮಂಚಿಕೇರಿ ಮುಖ್ಯ ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್ ಮಾತನಾಡಿ, ರಸ್ತೆಗಳು ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ದಿನ ಕಾದು ನೋಡಿದ್ದೇವೆ. ಆದರೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಬೇಕಾಯಿತು ಎಂದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಯಲ್ಲಾಪುರ ತಾಲೂಕಿಗೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗ ಪೂರ್ಣಗೊಳಿಸಿ, ಅದನ್ನೇ ತಮ್ಮ ಸರ್ಕಾರದ ಅಭಿವೃದ್ಧಿ ಎಂದು ಬಿಂಬಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಟೀಕಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯ ಹೊಂಡಗಳನ್ನು ಎಷ್ಟು ದಿನಗಳೊಳಗೆ ಮುಚ್ಚಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಲ್ಲದೆ, ಶಿರಸಿ–ಯಲ್ಲಾಪುರ ಮುಖ್ಯ ರಸ್ತೆಯ ಸಂಪೂರ್ಣ ದುರಸ್ತಿಗೆ ಕೈಗೊಳ್ಳುವ ಕ್ರಮಗಳ ಕುರಿತು ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಭರವಸೆ ಈಡೇರದಿದ್ದರೆ ರಸ್ತೆಯ ಪ್ರತಿಯೊಂದು ಹೊಂಡಕ್ಕೂ ಒಂದೊಂದು ಸಚಿವರ ಹೆಸರು ನಾಮಕರಣ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರು, ಒಂದು ವಾರದೊಳಗೆ ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಮಳೆಗಾಲ ಮುಗಿದ ಬಳಿಕ ಈಗಾಗಲೇ ಮಂಜೂರಾಗಿರುವ ಆರು ಕಿ.ಮೀ. ರಸ್ತೆ ಕಾಮಗಾರಿಗೆ ತಕ್ಷಣ ರಿಕೋಟಿಂಗ್ ಆರಂಭಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಭರವಸೆ ಬಳಿಕ ರಸ್ತೆ ತಡೆ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಟರಾಜ್ ಗೌಡರ, ಹಾಸಣಗಿ ಶಕ್ತಿ ಕೇಂದ್ರದ ಅಧ್ಯಕ್ಷ ದಿವಾಕರ ಪೂಜಾರಿ, ಕಂಪ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣಪತಿ ಹೆಗಡೆ, ತಾಲೂಕು ಉಪಾಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.