ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮನೆಯೊಂದರ ಅಡುಗೆ ಕೋಣೆಗೆ ನಾಗರಹಾವು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ, ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಅಗಡಿ ಗ್ರಾಮದ ಪ್ರವೀಣ ಸಿಂಗ್ ಕಿಲ್ಲೆದಾರ್ ಅವರ ಮನೆಯ ಅಡುಗೆ ಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಇದರಿಂದ ಮನೆಯವರು ಆತಂಕಗೊಂಡಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಇಂದೂರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುನೀತಾ ಅವರು ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿದ ಮುತ್ತುರಾಜ ಹಳ್ಳಿ ಅವರು ಅಡುಗೆ ಮನೆಯಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ಅತ್ಯಂತ ಜಾಣ್ಮೆಯಿಂದ ಸುರಕ್ಷಿತವಾಗಿ ಸೆರೆಹಿಡಿದರು.
ಬಳಿಕ ನಾಗರಹಾವನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮನೆಯವರು ಹಾಗೂ ಸ್ಥಳೀಯರಿಗೆ ಹಾವುಗಳ ಸಂರಕ್ಷಣೆ, ಅವುಗಳನ್ನು ಕಂಡಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಹಾವುಗಳಿಗೆ ತೊಂದರೆ ನೀಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಕುರಿತು ಜಾಗೃತಿ ಮೂಡಿಸಲಾಯಿತು.
ಅಡುಗೆ ಮನೆಗೆ ನುಗ್ಗಿದ ನಾಗರಹಾವನ್ನು ಯಾವುದೇ ಆತಂಕಕಾರಿ ಪರಿಸ್ಥಿತಿ ಉಂಟಾಗದಂತೆ ತ್ವರಿತವಾಗಿ ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.