Monday, September 7, 2026
Join WhatsApp Group
HomeLocal Newsಅಭಿವೃದ್ಧಿಯೊಂದೇ ಮುಖ್ಯವಾಗಬಾರದು: ಜಗದೀಶ ವಡ್ನಾಳ

ಅಭಿವೃದ್ಧಿಯೊಂದೇ ಮುಖ್ಯವಾಗಬಾರದು: ಜಗದೀಶ ವಡ್ನಾಳ

ಯಲ್ಲಾಪುರ: ಜೀವವೈವಿಧ್ಯ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬ ಸದಸ್ಯರೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಜೀವವೈವಿಧ್ಯ ಮಂಡಳಿ ನಿಮ್ಮೊಂದಿಗೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಜಗದೀಶ ವಡ್ನಾಳ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ನೂತನ ಸದಸ್ಯರ ಸ್ವಾಗತ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಪರೂಪದ ಸಸ್ಯ ಪ್ರಭೇದಗಳು ಹಾಗೂ ಔಷಧೀಯ ಸಸ್ಯಗಳ ಕುರಿತು ಸಮಗ್ರ ದಾಖಲೀಕರಣ ನಡೆಯಬೇಕು. ಅವುಗಳ ಸುಸ್ಥಿರ ಬಳಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡುವುದರ ಜತೆಗೆ, ಅಪರೂಪದ ಸಸ್ಯ ಪ್ರಭೇದಗಳನ್ನು ಹೊಸದಾಗಿ ಬೆಳೆಸುವ ಕಾರ್ಯವೂ ಸಮಿತಿಗಳ ಮೂಲಕ ನಡೆಯಬೇಕು ಎಂದು ಅವರು ಹೇಳಿದರು.

ಅಭಿವೃದ್ಧಿಯೊಂದೇ ಮುಖ್ಯವಾಗಬಾರದು. ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಹಾಗೂ ಆರೋಗ್ಯಕರ ಪರಿಸರವನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಜಗದೀಶ ವಡ್ನಾಳ ಕರೆ ನೀಡಿದರು.

ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸಮಿತಿಗಳು ಕೇವಲ ಸಭೆ ಹಾಗೂ ಭಾಷಣಗಳಿಗೆ ಸೀಮಿತವಾಗದೆ, ತಮ್ಮ ಉದ್ದೇಶಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಅವುಗಳ ರಚನೆಯ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ. ಕಾಲಕಾಲಕ್ಕೆ ಸಭೆ ಸೇರಿ ಸಂರಕ್ಷಣೆ, ದಾಖಲೀಕರಣ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಬೇಕು ಎಂದರು.

ಯಲ್ಲಾಪುರ ತಾಲೂಕಿನಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಇದೆ. ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿ, ಇತರ ತಾಲೂಕುಗಳಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಹಿರಿಯ ಅಧಿಕಾರಿ ಪವಿತ್ರಾ, ಅಧಿಕಾರಿಗಳಾದ ಪ್ರಸನ್ನ, ಪ್ರೀತಮ್, ಎಸಿಎಫ್ ಹಿಮವತಿ ಭಟ್ಟ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ರಾಘವ, ಮಂಜುನಾಥ ಆಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪಶ್ಚಿಮ ಘಟ್ಟದ ಜೀವವೈವಿಧ್ಯ, ಅರಣ್ಯ ಹಾಗೂ ಪರಿಸರ ಅಧ್ಯಯನಗಳ ಕುರಿತು ನಡೆದ ಕಾರ್ಯಾಗಾರದ ಮಾಹಿತಿಯ ಪುಸ್ತಕ ಮತ್ತು ತಾಲೂಕಿನ ನಾಟಿ ವೈದ್ಯರ ವಿವರಗಳನ್ನು ಒಳಗೊಂಡ ಕೈಪಿಡಿಯನ್ನು ಜಗದೀಶ ವಡ್ನಾಳ ಬಿಡುಗಡೆಗೊಳಿಸಿದರು.

ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು. ಇಒ ರಾಜೇಶ ಧನವಾಡಕರ್ ಸ್ವಾಗತಿಸಿದರು. ಸದಸ್ಯ ಕೆ.ಎಸ್. ಭಟ್ಟ ಆನಗೋಡ ಕಾರ್ಯಕ್ರಮ ನಿರ್ವಹಿಸಿದರು. ಪ್ರಗತಿ ಸಹಾಯಕ ಗಣಪತಿ ಭಾಗ್ವತ ವಂದಿಸಿದರು.

ತಾಲೂಕು ಜೀವವೈವಿಧ್ಯ ಸಮಿತಿ ಸದಸ್ಯರು, ವಿವಿಧ ಗ್ರಾಮ ಪಂಚಾಯಿತಿಗಳ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು, ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share