ಯಲ್ಲಾಪುರ: ರಸ್ತೆಯಲ್ಲಿ ಚಲಿಸುತ್ತಿದ್ದ ಸಾರಿಗೆ ಬಸ್ಗೆ ಏಕಾಏಕಿ ಬ್ರೇಕ್ ಕೈಕೊಟ್ಟರೆ ಪರಿಸ್ಥಿತಿ ಹೇಗಿರಬಹುದು? ಇಂತಹ ತುರ್ತು ಪರಿಸ್ಥಿತಿಯಲ್ಲೂ ಚಾಲಕ ಗಾಬರಿಯಾಗದೆ ತಕ್ಷಣ ಬಸ್ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ನಿಲ್ಲಿಸಿದ್ದರಿಂದ ಯಲ್ಲಾಪುರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ಅಂಕೋಲಾ ಸಾರಿಗೆ ಡಿಪೋಗೆ ಸೇರಿದ ಬಸ್ಸೊಂದು ಹುಬ್ಬಳ್ಳಿಗೆ ತೆರಳಿ ಅಂಕೋಲಾಕ್ಕೆ ವಾಪಸ್ ಬರುತ್ತಿತ್ತು. ಬುಧವಾರ ಮಧ್ಯಾಹ್ನ ಸುಮಾರು 2.45ರ ವೇಳೆಗೆ ಯಲ್ಲಾಪುರ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಬಸ್ನ ಬ್ರೇಕ್ ಏಕಾಏಕಿ ಕೆಲಸ ಮಾಡದಿರುವುದು ಚಾಲಕನ ಗಮನಕ್ಕೆ ಬಂದಿದೆ.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಚಾಲಕನಿಗೆ ಕ್ಷಣಮಾತ್ರದ ಗಾಬರಿಯೂ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಆದರೆ ಚಾಲಕ ಕಮಲಾಕ್ಷ ನಾಯ್ಕ ಅವರು ಪರಿಸ್ಥಿತಿಯನ್ನು ತಕ್ಷಣ ಅರ್ಥಮಾಡಿಕೊಂಡು ಬಸ್ನ ವೇಗವನ್ನು ನಿಯಂತ್ರಿಸಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗದೆ ಬಸ್ನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸ್ನಲ್ಲಿದ್ದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ವಾಹಕಿ ಪಲ್ಲವಿ ಅವರು ಪರಿಸ್ಥಿತಿಯನ್ನು ಪ್ರಯಾಣಿಕರಿಗೆ ವಿವರಿಸಿದ್ದಾರೆ. ಬಳಿಕ ಯಲ್ಲಾಪುರ ನಿಲ್ದಾಣದಲ್ಲೇ ಎಲ್ಲ ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಲಾಗಿದೆ.
ನಂತರ ದೋಷಪೂರಿತ ಬಸ್ನ್ನು ಯಲ್ಲಾಪುರ ಡಿಪೋಗೆ ಕೊಂಡೊಯ್ದು ಅಗತ್ಯ ದುರಸ್ತಿ ಮಾಡಲಾಗಿದೆ. ದುರಸ್ತಿ ಪೂರ್ಣಗೊಂಡ ಬಳಿಕ ಬಸ್ ಮತ್ತೆ ನಿಲ್ದಾಣಕ್ಕೆ ಆಗಮಿಸಿದ್ದು, ಪ್ರಯಾಣಿಕರನ್ನು ಹತ್ತಿಸಿಕೊಂಡು ಅಂಕೋಲಾಕ್ಕೆ ಸುರಕ್ಷಿತವಾಗಿ ತೆರಳಿದೆ.
ಬ್ರೇಕ್ ವೈಫಲ್ಯದಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಚಾಲಕ ಕಮಲಾಕ್ಷ ನಾಯ್ಕ ಅವರು ತೋರಿದ ಸಮಯಪ್ರಜ್ಞೆ ಮತ್ತು ಸಂಯಮ ಇದೀಗ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.