ಹಾಸನ: ಆಸ್ತಿ ವಿವಾದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಬರ್ಬರವಾಗಿ ಹ*ತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿಯಲ್ಲಿ ನಡೆದಿದೆ.
ಮೃ*ತರನ್ನು 58 ವರ್ಷದ ವೀರಪ್ಪ ಎಂದು ಗುರುತಿಸಲಾಗಿದೆ. ಅವರು ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರ ಚಿಕ್ಕಪ್ಪ ಬಾಗಲಯ್ಯ ಎರಡು ಎಕರೆ ಜಮೀನನ್ನು ದಾನಪತ್ರದ ಮೂಲಕ ವೀರಪ್ಪ ಅವರಿಗೆ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆಸ್ತಿ ವೀರಪ್ಪನ ಹೆಸರಿಗೆ ನೋಂದಾಯಿತವಾಗಿತ್ತು.
ಆದರೆ, ಬಾಗಲಯ್ಯ ಅವರ ಪುತ್ರಿಯರಾದ ಮಲ್ಲಮ್ಮ ಮತ್ತು ಮಹದೇವಮ್ಮ ಹಾಗೂ ಅವರ ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಮಂಗಳವಾರ ಆಲೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ವೀರಪ್ಪ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಜಮೀನಿನ ಬಳಿ ತೆರಳಿದ ವೇಳೆ ಆರೋಪಿಗಳು ಹಿಂಬಾಲಿಸಿ ಹಲ್ಲೆ ನಡೆಸಿ ಕೊಲೆಗೈದಿದ್ದು, ಬಳಿಕ ಮೃ*ತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ಮಲ್ಲಮ್ಮನ ಮಕ್ಕಳಾದ ಹರೀಶ್ ಮತ್ತು ಪ್ರಕಾಶ್ ಹಾಗೂ ಮಹದೇವಮ್ಮನ ಪುತ್ರ ಮಹದೇವ್ ಸೇರಿದಂತೆ ಕುಟುಂಬಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.