Friday, October 23, 2026
HomeInformationಕಿವಿಗೆ ಫೋನ್ ಇಟ್ಟಾಕ್ಷಣ ಸ್ಕ್ರೀನ್‌ ಆಫ್ ಆಗೋದ್ಯಾಕೆ?

ಕಿವಿಗೆ ಫೋನ್ ಇಟ್ಟಾಕ್ಷಣ ಸ್ಕ್ರೀನ್‌ ಆಫ್ ಆಗೋದ್ಯಾಕೆ?

ಸ್ಮಾರ್ಟ್‌ಫೋನ್‌ನಲ್ಲಿ ಈ ಪುಟ್ಟ ಸೆನ್ಸಾರ್‌ ಇಲ್ಲದಿದ್ದರೆ ಆಗುತ್ತಿದ್ದ ಅನಾಹುತವೇ ಬೇರೆ!

>>ಕೆನರಾ ನೆಕ್ಸ್ಟ್‌ ನ್ಯೂಸ್‌ ಡೆಸ್ಕ್

ಬೆಳಗ್ಗೆ ಯಾರದ್ದೋ ಕರೆ ಬಂತು ಅಂದುಕೊಳ್ಳಿ. ಫೋನ್‌ ಕೈಗೆತ್ತಿಕೊಂಡು, “ಹಲೋ…” ಎನ್ನುತ್ತಾ ಕಿವಿಗೆ ಇಡುತ್ತೇವೆ. ಅಷ್ಟರಲ್ಲಿ ಇಷ್ಟು ಹೊತ್ತು ಹೊಳೆಯುತ್ತಿದ್ದ ಸ್ಕ್ರೀನ್‌ ಸದ್ದಿಲ್ಲದೆ ಕತ್ತಲಾಗಿಬಿಡುತ್ತದೆ. ಮಾತು ಮುಗಿಸಿ ಫೋನ್‌ ಕಿವಿಯಿಂದ ಸ್ವಲ್ಪ ದೂರ ಮಾಡಿದರೆ ಮತ್ತೆ ಬೆಳಕು! ಇದು ಫೋನ್‌ನ ಯಾವ ಮಾಯೆ? ಇದನ್ನೆಲ್ಲ ನೋಡಿದಾಗ, “ನನ್ನ ಫೋನ್‌ಗೆ ನನ್ನ ಕಿವಿಯ ಮೇಲೆ ಇಷ್ಟೊಂದು ಗೌರವವೇ?” ಎಂದುಕೊಳ್ಳಬೇಕಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವುದು ಒಂದು ಪುಟ್ಟ Proximity Sensor! ಅಂದರೆ, ‘ಹತ್ತಿರ ಬಂದಿದ್ದೀಯಾ?’ ಎಂದು ಕೇಳದೆ ಗೊತ್ತುಮಾಡಿಕೊಳ್ಳುವ ಸೆನ್ಸಾರ್!

ಸಾಮಾನ್ಯವಾಗಿ ಫೋನ್‌ನ ಮೇಲ್ಭಾಗದಲ್ಲಿ ಇರುವ ಈ ಸೆನ್ಸಾರ್‌ನಲ್ಲಿ ಒಂದು ಇನ್‌ಫ್ರಾರೆಡ್ ಬೆಳಕು ಹೊರಸೂಸುವ ಭಾಗ ಮತ್ತು ಅದನ್ನು ಸ್ವೀಕರಿಸುವ ಭಾಗ ಇರುತ್ತವೆ. ಕಣ್ಣಿಗೆ ಕಾಣದ ಇನ್‌ಫ್ರಾರೆಡ್ ಕಿರಣವನ್ನು ಅದು ಹೊರಗೆ ಕಳುಹಿಸುತ್ತದೆ. ನಿಮ್ಮ ಮುಖ ಅಥವಾ ಕಿವಿ ಹತ್ತಿರ ಬಂದಾಗ ಆ ಕಿರಣಗಳು ಪ್ರತಿಫಲಿಸಿ ಮರಳಿ ಬರುತ್ತವೆ. ಅದನ್ನು ಸೆನ್ಸಾರ್ ಗುರುತಿಸಿ, “ಸಾರ್, ಫೋನ್ ಈಗ ಕಿವಿಯ ಹತ್ತಿರ ಬಂದಿದೆ” ಎಂದು ಫೋನ್‌ನ ಸಾಫ್ಟ್‌ವೇರ್‌ಗೆ ಹೇಳುತ್ತದೆ. ತಕ್ಷಣ ಪರದೆ ಆಫ್‌, ಟಚ್‌ಸ್ಕ್ರೀನ್ ನಿಷ್ಕ್ರಿಯ!

ಇದರ ಹಿಂದೆ ಇರುವ ಉದ್ದೇಶ ತುಂಬಾ ಸರಳ. ನಾವು ಫೋನ್‌ನ್ನು ಕಿವಿಗೆ ಇಟ್ಟು ಮಾತನಾಡುವಾಗ ಗಲ್ಲ, ಕಿವಿ ಅಥವಾ ಮುಖದ ಭಾಗ ಪರದೆಗೆ ತಾಗುತ್ತಿರುತ್ತದೆ. ಪರದೆ ಆನ್ ಆಗಿಯೇ ಇದ್ದರೆ ಏನಾಗಬಹುದು? ಕಿವಿಯಿಂದಲೇ ಯಾವುದೋ ಬಟನ್ ಒತ್ತಬಹುದು, ಕರೆ ಮ್ಯೂಟ್ ಆಗಬಹುದು, ಸ್ಪೀಕರ್ ಆನ್ ಆಗಬಹುದು, ಮತ್ತೇನೋ ಅಪ್ಲಿಕೇಶನ್ ತೆರೆದುಕೊಳ್ಳಬಹುದು! ಅಂದರೆ ನಾವು ಸ್ನೇಹಿತನ ಜೊತೆ ಮಾತನಾಡುತ್ತಿದ್ದೇವೆ ಎಂದುಕೊಂಡು, ಕಿವಿಯಿಂದಲೇ ಫೋನ್‌ಗೆ ಬೇರೆ ಕೆಲಸ ಕೊಟ್ಟಂತಾಗುತ್ತದೆ. ಈ ಅನಗತ್ಯ ಟಚ್‌ಗಳನ್ನು ತಡೆಯುವುದೇ ಸೆನ್ಸಾರ್‌ನ ಪ್ರಮುಖ ಕೆಲಸ. ಜೊತೆಗೆ ಪರದೆ ಆಫ್ ಇರುವುದರಿಂದ ಸ್ವಲ್ಪ ಬ್ಯಾಟರಿಯೂ ಉಳಿಯುತ್ತದೆ.

ಹಾಗಾದರೆ ಈ ಅದ್ಭುತ ಸೆನ್ಸಾರ್‌ನ್ನು ಕಂಡುಹಿಡಿದವರು ಯಾರು? ಇಲ್ಲಿ ಒಂದು ಕುತೂಹಲಕರ ವಿಷಯವಿದೆ. Proximity Sensor ಅನ್ನು ಒಬ್ಬ ವ್ಯಕ್ತಿಯೇ ಕಂಡುಹಿಡಿದರು ಎಂದು ಹೇಳಲು ಸಾಧ್ಯವಿಲ್ಲ. ಹತ್ತಿರದಲ್ಲಿರುವ ವಸ್ತುವನ್ನು ಪತ್ತೆಹಚ್ಚುವ ತಂತ್ರಜ್ಞಾನದಲ್ಲಿ ಇನ್‌ಫ್ರಾರೆಡ್, ಆಪ್ಟಿಕಲ್, ಕ್ಯಾಪಾಸಿಟಿವ್ ಸೇರಿದಂತೆ ಹಲವು ವಿಧಾನಗಳು ವರ್ಷಗಳ ಕಾಲ ಅಭಿವೃದ್ಧಿಯಾಗಿವೆ. ಮೊಬೈಲ್ ಫೋನ್‌ಗಳಲ್ಲಿ ಬಳಸುವ ಇನ್‌ಫ್ರಾರೆಡ್ ಪ್ರಾಕ್ಸಿಮಿಟಿ ಸೆನ್ಸಾರ್ ಕೂಡ ಹಲವು ತಂತ್ರಜ್ಞಾನಗಳ ಅಭಿವೃದ್ಧಿಯ ಫಲ. ನಂತರ ಮೊಬೈಲ್ ವಿನ್ಯಾಸಕ್ಕೆ ತಕ್ಕಂತೆ ಅದನ್ನು ಚಿಕ್ಕದಾಗಿ, ವೇಗವಾಗಿ ಮತ್ತು ಕಡಿಮೆ ವಿದ್ಯುತ್ ಬಳಕೆಯಾಗುವಂತೆ ರೂಪಿಸಲಾಗಿದೆ.

ಇನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ… ಈ ಸೆನ್ಸಾರ್ ಫೋನ್‌ನಲ್ಲಿ ಇಲ್ಲದಿದ್ದರೆ? ನೀವು ಕರೆ ಸ್ವೀಕರಿಸಿ ಕಿವಿಗೆ ಫೋನ್ ಇಟ್ಟಿದ್ದೀರಿ. ಆದರೆ ಪರದೆ ಹಾಗೆಯೇ ಬೆಳಗುತ್ತಿದೆ. ನಿಮ್ಮ ಕಿವಿ ಒಂದು ಬಟನ್ ಮೇಲೆ ಬಿತ್ತು, ಕರೆ ಹೋಲ್ಡ್! ಗಲ್ಲ ಮತ್ತೊಂದು ಕಡೆ ತಾಗಿತು, ಲೌಡ್‌ ಸ್ಪೀಕರ್ ಆನ್! ಸ್ವಲ್ಪ ಜಾರಿತು, ಯಾರಿಗೋ ಕರೆ ಹೋಗಿಬಿಟ್ಟಿತು! ಎದುರಿನ ವ್ಯಕ್ತಿ “ಹಲೋ… ಹಲೋ…” ಎನ್ನುತ್ತಿದ್ದಾನೆ. ನೀವು ಮಾತ್ರ “ನಾನು ಏನೂ ಮಾಡಿಲ್ಲವಲ್ಲ!” ಎಂಬ ಮುಖಭಾವದಲ್ಲಿ ಕುಳಿತಿರುತ್ತಿದ್ದಿರಿ!

ಇದಕ್ಕಾಗಿಯೇ ಫೋನ್‌ನಲ್ಲಿರುವ ಈ ಪುಟ್ಟ ಸೆನ್ಸಾರ್ ನಮ್ಮ ಗಮನಕ್ಕೆ ಬಾರದೇ ಪ್ರತಿದಿನ ಒಂದು ದೊಡ್ಡ ಕೆಲಸ ಮಾಡುತ್ತಿದೆ. ಕೆಲವೊಮ್ಮೆ ಅದು ಸರಿಯಾಗಿ ಕೆಲಸ ಮಾಡದಿದ್ದರೆ ಸ್ಕ್ರೀನ್ ಪ್ರೊಟೆಕ್ಟರ್, ಕೇಸ್, ಧೂಳು ಅಥವಾ ಸೆನ್ಸಾರ್ ಮುಚ್ಚುವಂತಹ ವಸ್ತುಗಳೂ ಕಾರಣವಾಗಬಹುದು.

ನಾವು ಪ್ರತಿದಿನ ಫೋನ್ ಬಳಸುತ್ತೇವೆ. ಕರೆ ಮಾಡುತ್ತೇವೆ, ಸಂದೇಶ ಕಳುಹಿಸುತ್ತೇವೆ, ವಿಡಿಯೋ ನೋಡುತ್ತೇವೆ. ಆದರೆ ಅದರೊಳಗೆ ನಮ್ಮ ಕಣ್ಣಿಗೆ ಕಾಣದ ಬೆಳಕನ್ನು ಕಳುಹಿಸಿ, ಅದು ಮರಳಿ ಬಂದಿದೆಯೇ ಎಂದು ಗಮನಿಸುತ್ತಿರುವ ಪುಟ್ಟ ಕಾವಲುಗಾರನೊಬ್ಬ ಇದ್ದಾನೆ. ಅವನ ಕೆಲಸವೂ ವಿಚಿತ್ರವೇ ನೋಡಿ. “ಫೋನ್ ಕಿವಿಗೆ ಹತ್ತಿರ ಬಂದಾಗ ಪರದೆಗೆ ಬಾಯಿ ಮುಚ್ಚಿಸು!”

ಮುಂದಿನ ಬಾರಿ ಕರೆ ಬಂದಾಗ ಫೋನ್‌ನ್ನು ಕಿವಿಗೆ ಇಡುವಾಗ ಒಮ್ಮೆ ನೆನಪಿಸಿಕೊಳ್ಳಿ… ನೀವು ಫೋನ್‌ನ್ನು ಕಿವಿಗೆ ಇಟ್ಟಿಲ್ಲ. ನಿಮ್ಮ ಕಿವಿ ಮತ್ತು ಫೋನ್ ನಡುವಿನ ಅಂತರವನ್ನು ಒಬ್ಬ ಪುಟ್ಟ ವಿಜ್ಞಾನಿ ಅಳೆಯುತ್ತಿದ್ದಾನೆ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share