ಕಾರವಾರ: ತರಗತಿಯಲ್ಲಿ ಕಲಿತ ತಾಂತ್ರಿಕ ಜ್ಞಾನಕ್ಕೆ ಕೈಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅನುಭವವೂ ಸೇರಿದರೆ ಉದ್ಯೋಗದ ಅವಕಾಶಗಳು ಮತ್ತಷ್ಟು ವಿಸ್ತರಿಸಬಹುದು. ಇದೇ ಉದ್ದೇಶದೊಂದಿಗೆ ಕಾರವಾರ ನೌಕಾ ಡಾಕ್ಯಾರ್ಡ್ ಸ್ಥಳೀಯ ನಾಲ್ಕು ಐಟಿಐಗಳೊಂದಿಗೆ ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದೆ.
ಕಾರವಾರದ ನೌಕಾ ಡಾಕ್ಯಾರ್ಡ್ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸೋಮನಾಥ ಐಟಿಐ ಬಿಣಗಾ, ಸರ್ಕಾರಿ ಐಟಿಐ ಬಾಡ್, ಮಲ್ಲಿಕಾರ್ಜುನ ಐಟಿಐ ಸಿದ್ದರ ಹಾಗೂ ಸರ್ಕಾರಿ ಐಟಿಐ ಅಂಕೋಲಾ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಮೂಲಕ ಸ್ಥಳೀಯ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್ಯಾರ್ಡ್ನಲ್ಲಿ ಬಳಸಲಾಗುತ್ತಿರುವ ಅತ್ಯಾಧುನಿಕ ನಿರ್ವಹಣಾ ಹಾಗೂ ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಕಾರ್ಯವಿಧಾನಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಲಿದೆ. ಉದ್ಯೋಗಕ್ಕೆ ಅಗತ್ಯವಾದ ಪ್ರಾಯೋಗಿಕ ತರಬೇತಿ ಹಾಗೂ ಕಾರ್ಯಸ್ಥಳದಲ್ಲೇ ಕಲಿಯುವ ಅವಕಾಶಗಳಿಗೂ ಒತ್ತು ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ನೌಕಾ ಡಾಕ್ಯಾರ್ಡ್ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಉಪಸ್ಥಿತರಿದ್ದರು.
ಮಾತನಾಡಿದ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ಕೌಶಲ್ಯಯುತ ಮಾನವ ಸಂಪನ್ಮೂಲ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಎಂಒಯು ಮೂಲಕ ವಿದ್ಯಾರ್ಥಿಗಳಿಗೆ ದೊರೆಯುವ ಉನ್ನತ ಮಟ್ಟದ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಐಟಿಐಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ತರಗತಿಯ ಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದ ವಾಸ್ತವ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಸಹಯೋಗಗಳು ಪ್ರಮುಖ ಪಾತ್ರ ವಹಿಸಲಿವೆ.ಕಾರವಾರದ ಯುವಕರಿಗೆ ನೌಕಾ ಡಾಕ್ಯಾರ್ಡ್ನಂತಹ ಅತ್ಯಾಧುನಿಕ ಕಾರ್ಯಸ್ಥಳದಲ್ಲಿ ಕಲಿಯುವ ಅವಕಾಶ ದೊರೆಯುತ್ತಿರುವುದು ಕೌಶಲ್ಯಾಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
ಕರ್ನಾಟಕ ನೌಕಾ ಪ್ರದೇಶದ ನಾಗರಿಕ–ಸೇನಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಈ ಸಹಯೋಗವು ಸ್ಥಳೀಯ ಯುವಕರ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶಗಳ ವಿಸ್ತರಣೆ ಹಾಗೂ ಪ್ರದೇಶದ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಣೆಗೆ ನೆರವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.