Monday, September 7, 2026
Join WhatsApp Group
HomeInformationಒಂದು ನೂಲು, ಹಲವು ಹೆಸರು! ನೂಲು ಹುಣ್ಣಿಮೆಯ ಹಿಂದಿನ ಕಥೆ

ಒಂದು ನೂಲು, ಹಲವು ಹೆಸರು! ನೂಲು ಹುಣ್ಣಿಮೆಯ ಹಿಂದಿನ ಕಥೆ

ಒಂದು ಪುಟ್ಟ ದಾರವನ್ನು ಕೈಗೆ ಕಟ್ಟಿಕೊಂಡರೆ ಸಾಕು, ಕಟ್ಟುವವರಿಗೂ, ಕಟ್ಟಿಸಿಕೊಳ್ಳುವವರಿಗೂ ಒಂಥರಾ ಖುಷಿ. ಅಂಗಡಿಯಲ್ಲಿ ಸಿಗುವ ರಾಖಿ ಆಗಿರಲಿ, ಮನೆಯಲ್ಲಿ ಅರಿಶಿನ ಹಚ್ಚಿ ತಯಾರಿಸಿದ ನೂಲು ಆಗಿರಲಿ, ಕೈಗೆ ಕಟ್ಟಿದ ಮೇಲೆ ಅದು ಬರೀ ದಾರವಾಗಿ ಉಳಿಯುವುದಿಲ್ಲ. ಅದರ ಜೊತೆ ಪ್ರೀತಿ, ಕಾಳಜಿ, ನಂಬಿಕೆ, ಸಂಬಂಧ ಎಲ್ಲವೂ ಗಂಟು ಹಾಕಿಕೊಂಡುಬಿಡುತ್ತವೆ.

ಇದೇ ಕಾರಣಕ್ಕೆ ಶ್ರಾವಣದ ಹುಣ್ಣಿಮೆ ನಮ್ಮ ಸಂಸ್ಕೃತಿಯಲ್ಲಿ ಇಷ್ಟು ವಿಶೇಷ. ಈ ದಿನದ ಆಚರಣೆಗೆ ಒಂದು ಹೆಸರು ಮಾತ್ರವಿಲ್ಲ; ಪ್ರದೇಶ ಬದಲಾದಂತೆ ಹೆಸರು, ಸಂಪ್ರದಾಯ, ಆಚರಣೆ ಬದಲಾಗುತ್ತದೆ. ಆದರೆ ಅದರೊಳಗಿನ ಭಾವ ಮಾತ್ರ ಬಂಧವನ್ನು ಗಟ್ಟಿಗೊಳಿಸುವುದು ಮಾತ್ರ.

ದೇಶದ ಬಹುತೇಕ ಕಡೆ ಈ ದಿನವನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ. ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ, ಅವನ ಆರೋಗ್ಯ, ಆಯುಷ್ಯ ಮತ್ತು ಕ್ಷೇಮಕ್ಕಾಗಿ ಹಾರೈಸುತ್ತಾಳೆ. ಸಹೋದರ ಕೂಡ ಅವಳಿಗೆ ರಕ್ಷಣೆ, ಬೆಂಬಲ ಮತ್ತು ಕಾಳಜಿಯ ಭರವಸೆ ನೀಡುತ್ತಾನೆ. ಇವತ್ತು ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬವೆಂದು ನಾವು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ ‘ರಕ್ಷಾ ಬಂಧನ’ದ ಕಲ್ಪನೆ ಅಷ್ಟಕ್ಕೇ ಸೀಮಿತವಾಗಿರಲಿಲ್ಲ ಎನ್ನುವುದನ್ನು ಪುರಾಣ ಹಾಗೂ ವಿವಿಧ ಪ್ರಾದೇಶಿಕ ಆಚರಣೆಗಳು ಸೂಚಿಸುತ್ತವೆ.

‘ರಕ್ಷಾ ಬಂಧನ’ ಎಂದರೆ ಸರಳವಾಗಿ ಹೇಳುವುದಾದರೆ ರಕ್ಷಣೆಯ ಬಂಧ. ಪುರಾಣಗಳಲ್ಲಿ ರಕ್ಷಾಸೂತ್ರ ಕಟ್ಟುವ ಹಲವು ಕಥೆಗಳು ಸಿಗುತ್ತವೆ. ಅವುಗಳಲ್ಲಿ ಇಂದ್ರನ ಕಥೆಯೂ ಒಂದು. ದೇವಾಸುರರ ಯುದ್ಧದ ಸಂದರ್ಭದಲ್ಲಿ ಇಂದ್ರನಿಗೆ ರಕ್ಷಣೆಯಾಗಲೆಂದು ಇಂದ್ರಾಣಿ ಪವಿತ್ರ ಸೂತ್ರವನ್ನು ಕಟ್ಟಿದಳು ಎಂಬ ನಂಬಿಕೆ ಇದೆ. ಅಂದರೆ ರಕ್ಷಾಸೂತ್ರದ ಅರ್ಥ ಮೂಲತಃ ಸಹೋದರ-ಸಹೋದರಿಯ ಸಂಬಂಧಕ್ಕಿಂತ ವಿಶಾಲವಾಗಿತ್ತು.

ಕೃಷ್ಣ ಮತ್ತು ದ್ರೌಪದಿಯ ಕಥೆಯೂ ಇದೇ ಭಾವವನ್ನು ನೆನಪಿಸುತ್ತದೆ. ಕೃಷ್ಣನ ಕೈಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಕಟ್ಟಿದಳು ಎಂಬ ಜನಪ್ರಿಯ ಹಿನ್ನೆಲೆಯಿದೆ. ಪ್ರತಿಯಾಗಿ ಕೃಷ್ಣ ಆ ಕಾಳಜಿಯ ಬಂಧವನ್ನು ಗೌರವಿಸಿದನು ಎನ್ನಲಾಗುತ್ತದೆ. ಈ ಕಥೆಯನ್ನು ರಕ್ಷಾ ಬಂಧನದ ನಿಖರ ಐತಿಹಾಸಿಕ ಮೂಲವೆಂದು ಹೇಳಲಾಗದಿದ್ದರೂ, ಸಂಬಂಧಕ್ಕೆ ರಕ್ತದ ಸಂಬಂಧವೇ ಇರಬೇಕೆಂದಿಲ್ಲ, ಕಾಳಜಿ ಇದ್ದಲ್ಲಿ ಬಂಧ ಮೂಡುತ್ತದೆ ಎನ್ನುವ ಭಾವವನ್ನು ಅದು ಚೆನ್ನಾಗಿ ಹೇಳುತ್ತದೆ.

ಇನ್ನು ನಮ್ಮ ಕರ್ನಾಟಕದಲ್ಲಿ ಕೇಳಿಬರುವ ‘ನೂಲು ಹುಣ್ಣಿಮೆ’ ಎಂಬ ಹೆಸರಿಗೂ ತನ್ನದೇ ಆದ ಹಿನ್ನೆಲೆ ಇದೆ. ಶ್ರಾವಣ ಹುಣ್ಣಿಮೆಯಂದು ವಿವಿಧ ಸಮುದಾಯಗಳಲ್ಲಿ ರಕ್ಷಾಸೂತ್ರ ಕಟ್ಟುವ ಸಂಪ್ರದಾಯಗಳಿವೆ. ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯಗಳಲ್ಲಿ ವೇದಾಧ್ಯಯನಕ್ಕೆ ಸಂಬಂಧಿಸಿದ ಉಪಾಕರ್ಮ ಆಚರಣೆಯೂ ನಡೆಯುತ್ತದೆ. ಈ ದಿನ ಯಜ್ಞೋಪವೀತ ಬದಲಿಸುವ ಸಂಪ್ರದಾಯವಿದೆ. ಪ್ರದೇಶ ಮತ್ತು ಸಮುದಾಯದ ಆಧಾರದಲ್ಲಿ ಈ ಆಚರಣೆಗೆ ಬೇರೆ ಬೇರೆ ಹೆಸರುಗಳಿವೆ.

ಕರಾವಳಿ ಭಾಗಕ್ಕೆ ಬಂದರೆ ಇದೇ ಹುಣ್ಣಿಮೆಯ ಮತ್ತೊಂದು ವಿಶೇಷ ರೂಪ ʻನಾರಳಿ ಹುಣ್ಣಿಮೆʼ. ಸಮುದ್ರವನ್ನೇ ಬದುಕಿನ ಆಧಾರವಾಗಿಸಿಕೊಂಡಿರುವ ಮೀನುಗಾರ ಸಮುದಾಯ ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಅರ್ಪಿಸಿ, ಮುಂದಿನ ಮೀನುಗಾರಿಕಾ ಋತು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುವ ಸಂಪ್ರದಾಯ ಹೊಂದಿದೆ.

ಇದರಿಂದ ನಮಗೆ ಅರ್ಥವಾಗುವ ಒಂದು ಸುಂದರ ಸಂಗತಿಯಿದೆ. ಹಬ್ಬ ಒಂದೇ, ಆಚರಣೆಗಳು ಹಲವು. ಭಾರತದಲ್ಲಿ ಸಂಪ್ರದಾಯಗಳು ಹೇಗೆ ಸ್ಥಳೀಯ ಬದುಕಿನೊಂದಿಗೆ ಬೆರೆತು ಹೊಸ ರೂಪ ಪಡೆದುಕೊಳ್ಳುತ್ತವೆ ಎಂಬುದಕ್ಕೆ ಶ್ರಾವಣ ಹುಣ್ಣಿಮೆ ಒಳ್ಳೆಯ ಉದಾಹರಣೆ.

ಹಾಗೆ ನೋಡಿದರೆ ರಾಖಿಯ ಬೆಲೆ ಎಷ್ಟು ಎಂಬುದು ಮುಖ್ಯವೇ ಅಲ್ಲ. ಕೆಲವೊಮ್ಮೆ ದುಬಾರಿ ಉಡುಗೊರೆ ಕೊಟ್ಟರೂ ಹೇಳಲಾಗದ ಮಾತನ್ನು ಒಂದು ಪುಟ್ಟ ನೂಲು ಹೇಳಿಬಿಡುತ್ತದೆ. ಅದಕ್ಕೇ ವರ್ಷಗಳು ಕಳೆದರೂ ಈ ಹಬ್ಬದ ಭಾವ ಹಳೆಯದಾಗುವುದಿಲ್ಲ.

ಕೊನೆಗೆ, ಕೆಲವು ಬಂಧಗಳನ್ನು ಗಟ್ಟಿಗೊಳಿಸಲು ದೊಡ್ಡ ದೊಡ್ಡ ಮಾತುಗಳೇನೂ ಬೇಕಾಗಿಲ್ಲ. ಒಂದು ಪುಟ್ಟ ನೂಲು, ಒಂದು ಸಣ್ಣ ಗಂಟು… ಅಷ್ಟೇ ಸಾಕು!

ಕೆನರಾ ನೆಕ್ಸ್ಟ್‌ ಓದುಗರೆಲ್ಲರಿಗೂ ʻರಕ್ಷಾ ಬಂಧನʼದ ಹಾರ್ದಿಕ ಶುಭಾಶಯಗಳು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share