ಮುಂಡಗೋಡ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಮಾನತೆ, ಶಿಕ್ಷಣ, ಸ್ವಾಭಿಮಾನ ಹಾಗೂ ಸಹೋದರತ್ವದ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ದೇವಾಲಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ-ಭೇದಗಳನ್ನು ಮೀರಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂಬುದು ನಾರಾಯಣ ಗುರುಗಳ ಪ್ರಮುಖ ಸಂದೇಶವಾಗಿತ್ತು. ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದುಹಾಕಲು ಅವರು ಶಿಕ್ಷಣ, ಸ್ವಾಭಿಮಾನ ಹಾಗೂ ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದ್ದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಹೆಬ್ಬಾರ್ ಕರೆ ನೀಡಿದರು.
ನಾರಾಯಣ ಗುರುಗಳ ಚಿಂತನೆಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ಸಮಾಜದ ಒಳಿತನ್ನು ಪ್ರತಿಪಾದಿಸುವಂತಹವು. ಪರಸ್ಪರ ಗೌರವ, ಸಹೋದರತ್ವ ಮತ್ತು ಸಮಾನತೆಯ ಮೂಲಕ ಉತ್ತಮ ಸಮಾಜ ನಿರ್ಮಿಸಲು ಅವರ ಸಂದೇಶಗಳು ಪ್ರೇರಣೆಯಾಗಿವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಅಭಿಪ್ರಾಯಪಟ್ಟರು.