ಹುತಾತ್ಮ ವಿನೋದ ನಾಯ್ಕ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ | 21ನೇ ಪುಣ್ಯತಿಥಿಯಲ್ಲಿ ವೀರ ಯೋಧನಿಗೆ ಗೌರವ ನಮನ
ಕಾರವಾರ: ಏಕೈಕ ಮಗನಾಗಿದ್ದರೂ ಭಾರತ ಮಾತೆಗೆ ಅಮೂಲ್ಯವಾದ ರತ್ನವನ್ನು ನೀಡಿದ ತಂದೆ ಮಹಾದೇವ ನಾಯ್ಕ ಅವರಿಗೆ ಪಾದಾಭಿವಂದನೆ ಸಲ್ಲಿಸುತ್ತೇನೆ. ವೀರ ಯೋಧ ವಿನೋದ ನಾಯ್ಕ ಅವರ ಬಲಿದಾನ ಇಂದಿಗೂ ಈ ಪುಣ್ಯಭೂಮಿಯಲ್ಲಿ ಜೀವಂತವಾಗಿದೆ. ಅವರ ಕುಟುಂಬದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಭಾವುಕರಾಗಿ ಹೇಳಿದರು.
ಕಡವಾಡ ಗ್ರಾಮದ ವೀರ ಯೋಧ, ಹುತಾತ್ಮ ಲ್ಯಾನ್ಸ್ ನಾಯಕ್ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುತಾತ್ಮ ಯೋಧನ ಸ್ಮಾರಕಕ್ಕೆ ನೂತನವಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರ ಮರಣವನ್ನಪ್ಪಿದ ವಿನೋದ ನಾಯ್ಕ ಅವರ ತ್ಯಾಗ ಹಾಗೂ ಶೌರ್ಯವನ್ನು ಸ್ಮರಿಸಿದ ರೂಪಾಲಿ ನಾಯ್ಕ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಕುಟುಂಬಗಳ ನೋವು ಮತ್ತು ತ್ಯಾಗವನ್ನು ಸಮಾಜ ಸದಾ ಗೌರವಿಸಬೇಕು ಎಂದರು.
ಸ್ಮಾರಕದ ಸುತ್ತಲೂ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟ್ ನಿರ್ಮಾಣಕ್ಕೆ ರೂಪಾಲಿ ನಾಯ್ಕ ಅವರು ಸ್ವಂತ ಧನ ಸಹಾಯ ನೀಡಿದ್ದರು. ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಹುತಾತ್ಮ ಯೋಧನ ತಂದೆ ಮಹಾದೇವ ಡಿ. ನಾಯ್ಕ, ತಮ್ಮ ಏಕೈಕ ಪುತ್ರನ ಸ್ಮರಣೆ ಹಾಗೂ ದೇಶಸೇವೆಯ ಭಾವನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದು ಆರ್.ನಾಯ್ಕ ಮಾತನಾಡಿ, ವೀರ ಯೋಧ ವಿನೋದ ನಾಯ್ಕ ಅವರ ಶೌರ್ಯ, ಬಲಿದಾನ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಲಾಗುತ್ತಿದೆ. ಹುತಾತ್ಮ ಯೋಧನ ಸ್ಮರಣೆಯನ್ನು ಉಳಿಸಿಕೊಂಡು ಹೋಗುವಲ್ಲಿ ಅವರ ತಂದೆ ಮಹಾದೇವ ನಾಯ್ಕ ಅವರ ಸೇವೆ ಶ್ಲಾಘನೀಯ ಎಂದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ ಮಾತನಾಡಿ, ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಗೌರವ ನಮನ ಸಲ್ಲಿಸುವ ಮೂಲಕ ವೀರ ಯೋಧನ ಕುಟುಂಬಕ್ಕೆ ಸಮಸ್ತ ದೇಶದ ಜನರ ಪರವಾಗಿ ಅಭಿನಂದನೆ ಸಲ್ಲಿಸೋಣ ಎಂದರು.
ಪುಣ್ಯತಿಥಿಯ ಅಂಗವಾಗಿ ರೂಪಾಲಿ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ನಿವೃತ್ತ ಸೈನಿಕರು ಮತ್ತು ಗ್ರಾಮಸ್ಥರ ವತಿಯಿಂದ ಸ್ಮಾರಕದ ಆವರಣದಲ್ಲಿ ತೆಂಗಿನ ಸಸಿಗಳು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು. ಬಳಿಕ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ, ಮಾಜಿ ಸದಸ್ಯರಾದ ಕಿಶೋರ ಕಡವಾಡಕರ, ದೇವಿದಾಸ ತಳೇಕರ, ನಿವೃತ್ತ ಸೈನಿಕರಾದ ಶೆಶಾಂಕ ಕಡವಾಡಕರ, ಬಾಲಕೃಷ್ಣ ಭೋವಿ, ಅನಿಲ ನಾಯ್ಕ, ಗಣಪತಿ ಗುರವ, ಕೃಷ್ಣಪ್ಪ ಬಾಂದೇಕರ, ಲಿಂಗೇಶ್ವರ ತಳೇಕರ, ಉದಯ ಮಾಂಜ್ರೇಕರ, ಅಶೋಕ ತಾಮಸೆ, ಪ್ರವೀಣ ಮಾಂಜ್ರೇಕರ, ರಾಜಾರಾಮ ನಾಯ್ಕ, ನಂದನ ಮಾಂಜ್ರೇಕರ, ರಾಮನಾಥ ನಾಯ್ಕ, ರೋಹಿದಾಸ ನಾಯ್ಕ, ರೇಖಾ ಆರ್. ನಾಯ್ಕ, ವಿಷ್ಣು ಗಾಯಕ ಸೇರಿದಂತೆ ಗಣ್ಯರು, ಅಭಿಮಾನಿಗಳು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.