ಭಟ್ಕಳ: ನಗರದ ಮುಗ್ದುಂಕಾಲೋನಿಯ ಶಾಹೀನ್ ಗ್ರೌಂಡ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಭಟ್ಕಳ ಶಹರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಅಂದಾಜು 10 ಸಾವಿರ ರೂ ಮೌಲ್ಯದ 146 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆ.30ರಂದು ಮಧ್ಯಾಹ್ನ 3.30ರ ಸುಮಾರಿಗೆ ಭಟ್ಕಳ ಶಹರದ ಮುಗ್ದುಂಕಾಲೋನಿ ಶಾಹೀನ್ ಗ್ರೌಂಡ್‌ನಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಮೊಹಮ್ಮದ್ ಸಿಮ್ರಾನ್ ಉಸ್ಮಾನ್ ಸನದಿ (29), ಮೊಹಮ್ಮದ್ ಅಖೀಲ್ ಮೊಹಮ್ಮದ್ ಜಾಫರ್ ಶೇಖ್ (25) ಹಾಗೂ ಮೊಹಮ್ಮದ್ ಇಮ್ರಾನ್ ಅಬ್ದುಲ್ ಗಫಾರ್ (25) ಎಂಬ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ಪೈಕಿ ಮೊದಲಿಬ್ಬರು ಯಾವುದೇ ಪರವಾನಗಿ ಇಲ್ಲದೆ ಗಾಂಜಾವನ್ನು ಅಕ್ರಮವಾಗಿ ಹೊಂದಿದ್ದು, ಅದನ್ನು ಮೂರನೇ ಆರೋಪಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಂಜಾವನ್ನು ಕಪ್ಪು ಬಣ್ಣದ ಕಾಲೇಜು ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದು, ಅದನ್ನು ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌ನಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಗಾಂಜಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಎಸ್. ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.