ಯಲ್ಲಾಪುರ ಜಿ+2 ಮನೆ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಲೋಕಾಯುಕ್ತ ತನಿಖೆಗೆ ಬಿಜೆಪಿ ಆಗ್ರಹ
ಯಲ್ಲಾಪುರ: ಬಡ ಹಾಗೂ ಸೂರಿಲ್ಲದವರಿಗೆ ಮನೆ ಒದಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಜಿ+2 ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳನ್ನು ಕಡೆಗಣಿಸಿ ಉಳ್ಳವರು ಹಾಗೂ ಪ್ರಭಾವಿಗಳಿಗೇ ಮನೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಯೋಜನೆಯಡಿ ನಿಗದಿಪಡಿಸಿರುವ ವಂತಿಗೆಗಿಂತ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಹಾಗೂ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಯಲ್ಲಾಪುರ ಬಿಜೆಪಿ ಮಂಡಳ ಆಗ್ರಹಿಸಿದೆ.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ, ಜಿ+2 ಮನೆಗಳ ಹಂಚಿಕೆ ವಿಚಾರವಾಗಿ ಬಿಜೆಪಿ ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯಿತಿ ಹಾಗೂ ತಹಸೀಲ್ದಾರ್ ಕಚೇರಿ ಎದುರು ಹೋರಾಟ ನಡೆಸುತ್ತಿದೆ. ಆದರೆ, ಆಡಳಿತದಿಂದ ಬಡವರ ಕಣ್ಣೊರೆಸುವ ಕೆಲಸವಾಗುತ್ತಿದೆಯೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚುವರಿ ಹಣವನ್ನು ಫಲಾನುಭವಿಗಳಿಂದ ಪಡೆಯಲಾಗುತ್ತಿದೆ. ಜಿ+2 ಮನೆ ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರ ಹೆಸರಿನಲ್ಲಿ ‘ಹೆಬ್ಬಾರ ನಗರ’ ಎಂದು ಪಟ್ಟಣ ಪಂಚಾಯಿತಿಯಿಂದ ನಾಮಕರಣಗೊಂಡಿರುವ ಪ್ರದೇಶದಲ್ಲಿ ಜಿ+2 ಮನೆಗಳ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿಬರುತ್ತಿರುವುದು ಶಾಸಕರಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಪ್ರಸಾದ ಹೆಗಡೆ ಹೇಳಿದರು.
ಜಿ+2 ಮನೆಗಳ ಹಂಚಿಕೆ ಕುರಿತು ಫಲಾನುಭವಿಗಳಿಂದ ನಿರಂತರವಾಗಿ ಅಸಮಾಧಾನ ವ್ಯಕ್ತವಾಗುತ್ತಿದ್ದರೂ ಶಾಸಕ ಶಿವರಾಮ ಹೆಬ್ಬಾರ ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಅವರಿಗೆ ಈ ಕುರಿತು ಮಾಹಿತಿ ಇಲ್ಲವೇ ಅಥವಾ ಗೊತ್ತಿದ್ದೂ ಮೌನವಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಆರೋಪಿಸಿದರು.
ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಯಲ್ಲಾಪುರದಲ್ಲಿ ಜಿ+2 ಯೋಜನೆಯಡಿ ಸೂರಿಲ್ಲದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಿಸಲು ಪಟ್ಟಣ ಪಂಚಾಯಿತಿ ಮೂಲಕ ಸುಮಾರು 47.7 ಕೋಟಿ ರೂ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅರ್ಹರನ್ನು ಹೊರತುಪಡಿಸಿ ಉಳ್ಳವರು ಹಾಗೂ ಶಾಸಕರ ಆಪ್ತ ವಲಯದವರಿಗೆ ಮನೆ ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಡೆದ ಮಾಹಿತಿಯ ಪ್ರಕಾರ ಅರ್ಹ ಫಲಾನುಭವಿಗಳು ಎರಡು ಕಂತುಗಳಲ್ಲಿ ಒಟ್ಟೂ 1 ಲಕ್ಷ ವಂತಿಗೆ ಪಾವತಿಸಿದರೆ ಅರ್ಹರಿಗೆ ಮನೆ ಮಂಜೂರು ಮಾಡಬಹುದಾಗಿದೆ. ಆದರೆ ಯಲ್ಲಾಪುರದಲ್ಲಿ ಇದರ ಜೊತೆಗೆ ಮತ್ತೆ 25 ರೂ ಸಾವಿರದ ಪ್ರತ್ಯೇಕ ಡಿಡಿ ಪಡೆಯಲಾಗುತ್ತಿದೆ. ಈ ಮೊತ್ತವು ಸ್ಥಳೀಯವಾಗಿ ರಚಿಸಿಕೊಂಡಿರುವ ಆಶ್ರಯ ಸಮಿತಿಯ ಖಾತೆಗೆ ಸೇರುತ್ತಿದೆ ಎಂದು ಸೋಮೇಶ್ವರ ನಾಯ್ಕ ಆರೋಪಿಸಿದರು.
ಇದರ ಬಗ್ಗೆ ಪಟ್ಟಣ ಪಂಚಾಯಿತಿ ಅಥವಾ ತಹಸೀಲ್ದಾರ್ ಕಚೇರಿಗೆ ಮಾಹಿತಿ ಇಲ್ಲ. ಅಲ್ಲದೆ, ನಿಗದಿತ ಮೊತ್ತದ ಹೊರತಾಗಿ ಮತ್ತೆ 50 ಸಾವಿರ ರೂ ಪಾವತಿಸಿದರೆ ಮನೆ ಮಂಜೂರು ಮಾಡಿಸುವುದಾಗಿ ಸರ್ಕಾರಿ ಅಧಿಕಾರಿಗಳಲ್ಲದ ಕೆಲವರು ಹಣ ಕೇಳುತ್ತಿದ್ದಾರೆ ಎಂಬ ದೂರುಗಳಿವೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಆಶ್ರಯ ನಿವೇಶನ ಫಲಾನುಭವಿ ನಾಗರಾಜ ನಾಯ್ಕ ಮಾತನಾಡಿ, 2007ರಲ್ಲಿಯೇ ತಮಗೆ ಆಶ್ರಯ ಮನೆ ಮಂಜೂರಾಗಿತ್ತು. ದಾಖಲೆಗಳನ್ನು ಪಟ್ಟಣ ಪಂಚಾಯಿತಿಗೆ ಸಲ್ಲಿಸಿದಾಗ ನಿವೇಶನ ಲಭ್ಯವಿಲ್ಲ ಎಂದು ಹಿಂಬರಹ ನೀಡಲಾಗಿತ್ತು. 2020ರಿಂದ ಜಿ+2 ಮನೆಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಇನ್ನೂ ಮನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಂತ ಮನೆ, ತೋಟ ಅಥವಾ ಆಸ್ತಿ ಹೊಂದಿರುವವರು ಹಾಗೂ ಮನೆಗಳನ್ನು ಬಾಡಿಗೆಗೆ ನೀಡಿರುವವರಿಗೂ ಜಿ+2 ಮನೆಗಳು ದೊರೆಯುತ್ತಿವೆ. ಆದರೆ ತಮ್ಮಂತಹ ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ ಮಾತನಾಡಿ, ಕೆಲವರು ಎರಡು ಮನೆಗಳನ್ನು ಪಡೆದು ಅವುಗಳನ್ನು ಒಂದಾಗಿಸಿ ವಾಸಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಜಿ+2 ಮನೆಗಳ ಹಂಚಿಕೆ ಕುರಿತು ಲೋಕಾಯುಕ್ತರಿಂದ ಸಮಗ್ರ ತನಿಖೆ ನಡೆಸಬೇಕು. ಅನರ್ಹರು ಮನೆ ಪಡೆದಿರುವುದು ತನಿಖೆಯಲ್ಲಿ ಸಾಬೀತಾದರೆ ಅಂತಹ ಮನೆಗಳ ವಿರುದ್ಧ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪದಾಧಿಕಾರಿಗಳು ಕಾಳಮ್ಮನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಶ್ರಯ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಗಳೂ ಗಮನಕ್ಕೆ ಬಂದಿವೆ. ನಿಜವಾದ ಸೂರಿಲ್ಲದ ಬಡವರಿಗೆ ಆದ್ಯತೆ ನೀಡಿ ಜಿ+2 ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಈ ವಿಚಾರದಲ್ಲಿ ಅಸಹಾಯಕರಾಗಿರುವುದರಿಂದ ಜಿಲ್ಲಾಧಿಕಾರಿಗಳೇ ಮಧ್ಯಪ್ರವೇಶಿಸಿ ಜಿ+2 ಮನೆಗಳ ಫಲಾನುಭವಿಗಳ ಪಟ್ಟಿ, ಅರ್ಹತಾ ಮಾನದಂಡ, ವಂತಿಗೆ ಹಾಗೂ ಹೆಚ್ಚುವರಿ ಹಣದ ಆರೋಪಗಳ ಕುರಿತು ಸ್ಪಷ್ಟ ಹಾಗೂ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ ಉಪಸ್ಥಿತರಿದ್ದರು.