ಹೊನ್ನಾವರ: ಟಿಪ್ಪರ್ ಲಾರಿಯ ಡೀಸೆಲ್ ಟ್ಯಾಂಕ್‌ನಿಂದ ಸುಮಾರು 140 ಲೀಟರ್ ಡೀಸೆಲ್ ಕಳ್ಳತನ ಮಾಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಮೂವರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಆ.28ರ ರಾತ್ರಿ 9ರಿಂದ ಆ.29ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಕೆಎ-17 ಡಿ-9894 ಸಂಖ್ಯೆಯ ಟಿಪ್ಪರ್ ಲಾರಿಯ ಡೀಸೆಲ್ ಟ್ಯಾಂಕ್‌ನಿಂದ ಸುಮಾರು 14,500 ರೂ ಮೌಲ್ಯದ 140 ಲೀಟರ್ ಡೀಸೆಲ್ ಕಳ್ಳತನವಾಗಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ಯೂನೂಸ್ ಶಬೀರ್ ಖಾನ್ (28), ಮಹ್ಮದ್ ಗೌಸ್ ಮಹಮ್ಮದ್ ಹಯಾತ್ ಸಾಬ್ (38) ಹಾಗೂ ಸೈಯ್ಯದ್ ಸಿಕಂದರ್ ಸಯ್ಯದ್ ಜಬ್ಬಾರ್ (22) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕೆಎ-14-ಬಿ-1126 ಸಂಖ್ಯೆಯ ಅಶೋಕ ಲೇಲ್ಯಾಂಡ್ ವಾಹನ ಹಾಗೂ ಡೀಸೆಲ್ ಕಳ್ಳತನಕ್ಕೆ ಬಳಸಿದ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಹಾಗೂ ಹೊನ್ನಾವರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಮಹಾಂತೇಶ ವಾಲ್ಮೀಕಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಹೊನ್ನಾವರ ಠಾಣೆಯ ಸಿಬ್ಬಂದಿ ಮನೋಜ್, ಡಿ. ರವಿ ನಾಯ್ಕ, ಗಜಾನನ ನಾಯ್ಕ, ಶಿವಾನಂದ ನಾಗರದಿನ್ನಿ ಹಾಗೂ ಅಂಕೋಲಾ ಠಾಣೆಯ ಮಹ್ಮದ್ ಶಫೀ, ಗಿರೀಶ್ ಮತ್ತು ಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.