ಕಾರವಾರ: ಸರ್ಕಾರಿ ಕಚೇರಿಗೆ ಒಂದು ಕೆಲಸಕ್ಕಾಗಿ ಹೋಗುವುದು, ಅರ್ಜಿ ಸಲ್ಲಿಸಿ ಮತ್ತೆ ಮತ್ತೆ ಕಚೇರಿಗೆ ಅಲೆಯುವುದು, ತಮ್ಮ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳ ಹಿಂದೆ ಓಡುವುದು… ಸಾಮಾನ್ಯ ಜನರಿಗೆ ಇಂತಹ ಅನುಭವಗಳು ಹೊಸದೇನಲ್ಲ. ಆದರೆ ಇನ್ನು ಮುಂದೆ ಆಡಳಿತವೇ ಜನರ ಬಳಿಗೆ ಬರಬೇಕು, ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಗಳ ಸುತ್ತ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ‘ಪ್ರಜಾಸೇವಾ ಅಭಿಯಾನ’ ಎಂಬ ಏಕೀಕೃತ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅಥವಾ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿ ಅವುಗಳಿಗೆ ಸ್ಪಂದಿಸುವ ಮೂಲಕ ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಪ್ರಯತ್ನವೂ ಇದರ ಹಿಂದಿದೆ.
ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದಕ್ಕಾಗಿ ‘ಪ್ರಜಾಸೇವಾ ಇಲಾಖೆ’ಯನ್ನು ರಚಿಸಲಾಗಿದ್ದು, ಪ್ರತಿ ಶನಿವಾರ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಸಭೆ ನಡೆಯಲಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ನಡೆಯಲಿದೆ.
ಹೀಗಾಗಿ ದೂರದ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬದಲು ಜನರ ಸಮೀಪದಲ್ಲಿಯೇ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಅವಕಾಶ ಸಿಗಲಿದೆ. ತಮ್ಮ ಸಮಸ್ಯೆ, ಅಹವಾಲು ಅಥವಾ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ಅರ್ಜಿಗಳನ್ನು ಸಾರ್ವಜನಿಕರು ಮುಂಚಿತವಾಗಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಸಭೆ ನಡೆಯುವ ಸ್ಥಳದಲ್ಲಿಯೂ ಉಚಿತ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಹೊಂದಿರುವ ಗ್ರಾಮ ಒನ್ ಮಳಿಗೆಗಳು ಲಭ್ಯವಿರಲಿದ್ದು, ಅಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಲಾದ ಅಹವಾಲುಗಳನ್ನು ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಇರಲಿದೆ. ಈಗಾಗಲೇ ಸಕಾಲ ಅಥವಾ IPGRS ವ್ಯವಸ್ಥೆಯಲ್ಲಿ ದೂರು ದಾಖಲಿಸಿದ್ದರೂ 21 ದಿನಗಳ ನಂತರವೂ ಸೂಕ್ತ ಪರಿಹಾರ ದೊರೆಯದ ಅಹವಾಲುದಾರರಿಗೆ ಜನಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಲು ಆದ್ಯತೆ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದ ದೂರುಗಳು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ವರ್ಗಾವಣೆಯಾಗುವುದರಿಂದ ಸಮಸ್ಯೆಗಳು ಕೆಳಮಟ್ಟದಲ್ಲಿಯೇ ಬಾಕಿ ಉಳಿಯದಂತೆ ಮೇಲ್ಮಟ್ಟದಲ್ಲೂ ಗಮನ ಹರಿಸುವ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಸಭೆಗಳಿಗೆ ಖುದ್ದಾಗಿ ತೆರಳುವುದು ಮಾತ್ರವಲ್ಲದೆ 1902 ಸಹಾಯವಾಣಿ, IPGRS ಪೋರ್ಟಲ್ ಅಥವಾ ‘ಜನಸ್ಪಂದನ’ ಮೊಬೈಲ್ ಆಪ್ ಮೂಲಕವೂ ತಮ್ಮ ದೂರುಗಳನ್ನು ದಾಖಲಿಸಬಹುದು. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಲ್ಲಿಯೂ ಬಾಕಿ ಉಳಿದಿರುವ ಅರ್ಜಿಗಳ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪ್ರಜಾಸೇವಾ ಅಭಿಯಾನದ ಸಭೆಗಳನ್ನು ವಿವಿಧ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕ ಸತೀಶ್ ಸೈಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಭಟ್ಕಳ ತಾಲೂಕಿನ ಮಾವಳ್ಳಿ ಹೋಬಳಿಯ ಮುರ್ಡೇಶ್ವರದ ಆರ್.ಎನ್.ಎಸ್. ಸಭಾಭವನದಲ್ಲಿ ವಿಧಾನಸಭಾ ಉಪಾಧ್ಯಕ್ಷ ಹಾಗೂ ಭಟ್ಕಳ-ಹೊನ್ನಾವರ ಶಾಸಕ ಮಂಕಾಳ ಎಸ್. ವೈದ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಹಳಿಯಾಳ ತಾಲೂಕಿನ ಸಂಬ್ರಾಣಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾ ಶಾಸಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ, ಶಿರಸಿ ತಾಲೂಕಿನ ಸಂಪಖಂಡ ಹೋಬಳಿಯ ಜಾನ್ಮನೆ ಗಜಾನನ ಪ್ರೌಢಶಾಲೆ ಸಭಾಭವನದಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ. ನಾಯ್ಕ ಅವರ ನೇತೃತ್ವದಲ್ಲಿ, ಯಲ್ಲಾಪುರ ತಾಲೂಕಿನ ಮಂಚಿಕೇರಿ ಹೋಬಳಿಯ ರಾಜರಾಜೇಶ್ವರಿ ಸಮಾಜ ಮಂದಿರದಲ್ಲಿ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಅವರ ನೇತೃತ್ವದಲ್ಲಿ ಹಾಗೂ ಕುಮಟಾ ತಾಲೂಕಿನ ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಕುಮಟಾ-ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಸಭೆಗಳನ್ನು ಆಯೋಜಿಸಲಾಗಿದೆ.
ಕಂದಾಯ, ಪಿಂಚಣಿ, ವಸತಿ, ರಸ್ತೆ, ನೀರು, ಆರೋಗ್ಯ, ಕೃಷಿ, ವಿದ್ಯುತ್, ದಾಖಲೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಜನರು ನೇರವಾಗಿ ಸಂಬಂಧಪಟ್ಟವರ ಗಮನಕ್ಕೆ ತರಬಹುದಾಗಿದೆ. ಆದರೆ ಯಾವುದೇ ಸರ್ಕಾರಿ ವ್ಯವಸ್ಥೆಯ ಯಶಸ್ಸು ಅದು ಘೋಷಣೆಯಾದುದರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಜನರು ಅದನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ.
ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಜನರಿಗೆ ನೇರ ವೇದಿಕೆ ಒದಗಿಸುವ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವಾಗಿ ಪ್ರಜಾಸೇವಾ ಅಭಿಯಾನ ರೂಪುಗೊಂಡಿದೆ. ಜನರು ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ದಾಖಲಿಸಿ, ಅರ್ಜಿಗಳ ಸ್ಥಿತಿಗತಿಯನ್ನು ಗಮನಿಸಿ, ಸಿಗಬೇಕಾದ ಸೌಲಭ್ಯಗಳಿಗಾಗಿ ಈ ಅವಕಾಶವನ್ನು ಬಳಸಿಕೊಂಡರೆ ಮಾತ್ರ ಈ ಅಭಿಯಾನದ ನಿಜವಾದ ಉದ್ದೇಶ ಈಡೇರಲು ಸಾಧ್ಯ.