ಕುಮಟಾ: ದಾರಿಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕುಮಟಾ ತಾಲೂಕಿನ ಹಳಕಾರ ಗ್ರಾಮದ ಇಬ್ಬರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳಕಾರ ಗ್ರಾಮದ ವನಿತಾ ಸುರೇಶ ಹರಿಕಂತ್ರ (40) ಅವರು ನೀಡಿದ ದೂರಿನ ಆಧಾರದ ಮೇಲೆ ಗೀತಾ ಗುರುನಾಥ ಶ್ಯಾನಭಾಗ (50) ಹಾಗೂ ಅವರ ಪುತ್ರಿ ಐಶ್ವರ್ಯ (23) ವಿರುದ್ಧ ಪ್ರಕರಣ ದಾಖಲಾಗಿದೆ.ದೂರಿನ ಪ್ರಕಾರ, ಆರೋಪಿತರು ಫಿರ್ಯಾದಿಯ ಪಕ್ಕದ ಮನೆಯಲ್ಲಿ ವಾಸವಾಗಿದ್ದು, ಬಿಡಾಡಿ ನಾಯಿಮರಿಗಳನ್ನು ತಂದು ಮನೆಯ ಸಮೀಪ ಬಿಡುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದರು ಎನ್ನಲಾಗಿದೆ.
ಸೆ.4ರಂದು ವನಿತಾ ಅವರು ಹಳಕಾರಕ್ಕೆ ತೆರಳಿ ಹೊಲಿಗೆಗೆ ನೀಡಿದ್ದ ಬಟ್ಟೆಗಳನ್ನು ಪಡೆದುಕೊಂಡು ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ, ಬೆಳಿಗ್ಗೆ ಸುಮಾರು 11.30ಕ್ಕೆ ಕುಜಳಿಮುಕ್ರಿ ಮನೆಯ ಸಮೀಪ ಆರೋಪಿತರು ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಬಂದು ದಾರಿಗೆ ಅಡ್ಡಗಟ್ಟಿ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಇಬ್ಬರೂ ಅವಾಚ್ಯವಾಗಿ ಬೈದು, ಮುಂದಿನ ದಿನಗಳಲ್ಲಿ ಊರಿನ ಜನರೊಂದಿಗೆ ಸೇರಿಕೊಂಡು ತಮ್ಮ ವಿರುದ್ಧ ಏನಾದರೂ ಮಾಡಿದರೆ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಿಂದೆ ಐಶ್ವರ್ಯ ಅವರು ಹಳಕಾರ ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಿಂದ ಅಮಾನತುಗೊಂಡಿದ್ದ ವಿಚಾರದಲ್ಲಿ ಫಿರ್ಯಾದಿ ಹಾಗೂ ಗ್ರಾಮದ ಜನರ ಮೇಲೆ ಆಕ್ರೋಶ ಹೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.