ಜೋಯಿಡಾ: ಜಮೀನಿನ ಗಡಿ ವಿಚಾರವಾಗಿ ನಡೆಯುತ್ತಿದ್ದ ವಿವಾದದ ಹಿನ್ನೆಲೆಯಲ್ಲಿ ಕೋಳಿ ಫಾರ್ಮ್ ಧ್ವಂಸ ಮಾಡಿ, ಕೋಳಿಗಳಿಗೆ ಹಾಕುವ ಆಹಾರದ ಪ್ಯಾಕೆಟ್‌ಗಳನ್ನು ಹರಿದು ಹಾಕಿ, ಗೋಡೌನ್‌ನಲ್ಲಿದ್ದ ಮೋಟಾರ್ ಹಾಗೂ ಹುಲ್ಲು ಕತ್ತರಿಸುವ ಯಂತ್ರ ಕಳವು ಮಾಡಲಾಗಿದೆ ಎಂದು ಆರೋಪಿಸಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ರಾಮನಗರ ಅಕ್ರಾಳಿ ಗ್ರಾಮದ ಸರ್ವೆ ನಂ. 243/ಬಿ, ಹಿಸ್ಸಾ ನಂ. 459ಎರಲ್ಲಿ ಒಟ್ಟು 6 ಎಕರೆ 7 ಗುಂಟೆ ಜಮೀನು ಫಿರ್ಯಾದಿಯ ತಾಯಿ ಆನಂದಿ ಕೃಷ್ಣಾ ಗೋಸಾವಿ ಅವರ ಹೆಸರಿನಲ್ಲಿದೆ. ಈ ಜಮೀನಿನಲ್ಲಿ ಫಿರ್ಯಾದಿ ಹಾಗೂ ಅವರ ಸಹೋದರರು ಕೋಳಿ ಫಾರ್ಮ್ ನಿರ್ಮಿಸಿಕೊಂಡಿದ್ದಾರೆ.
ಜಮೀನಿಗೆ ಹೊಂದಿಕೊಂಡಿರುವ ಜಾಗದ ಮಾಲೀಕರೊಂದಿಗೆ ಕಳೆದ ಒಂದು ವರ್ಷದಿಂದ ಗಡಿ ಹಾಗೂ ಬೇಲಿ ವಿಚಾರದಲ್ಲಿ ವಿವಾದ ನಡೆಯುತ್ತಿತ್ತು ಎನ್ನಲಾಗಿದೆ. ಆಗಸ್ಟ್ 19ರಂದು ಫಿರ್ಯಾದಿಯ ಅಣ್ಣನ ಮಗ ಅಕ್ಷಯ ಗೋಸಾವಿ ಜಮೀನಿಗೆ ತೆರಳಿದ್ದಾಗ, ಆರೋಪಿಗಳಾದ ರಮೇಶ ಚಿಕಲಕರ, ರೇಷ್ಮಾ ರಮೇಶ ಚಿಕಲಕರ ಹಾಗೂ ರೋಹಿತ ಚಿಕಲಕರ ಅವರು ಬೇಲಿ ಕಿತ್ತು ಹಾಕಿರುವುದಾಗಿ ಹೇಳಿ, ಕೋಳಿ ಫಾರ್ಮ್ ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರ ಸಂಜೆ 6.30ರಿಂದ ಸೆಪ್ಟೆಂಬರ್ 4ರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರೆಲ್ಲರೂ ಸೇರಿಕೊಂಡು ಅಕ್ರಾಳಿ ಗ್ರಾಮದ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಕೋಳಿ ಫಾರ್ಮ್ ಕೆಡವಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಕೋಳಿಗಳಿಗೆ ಬಳಸುವ ಆಹಾರದ ಪ್ಯಾಕೆಟ್‌ಗಳನ್ನು ಹರಿದು ಚಲ್ಲಾಪಿಲ್ಲಿಗೊಳಿಸಿದ್ದು, ಗೋಡೌನ್‌ನಲ್ಲಿದ್ದ 7 ಹೆಚ್‌ಪಿ ಮೋಟಾರ್ ಹಾಗೂ ಹುಲ್ಲು ಕತ್ತರಿಸುವ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ರಮೇಶ ಚಿಕಲಕರ, ರೇಷ್ಮಾ ರಮೇಶ ಚಿಕಲಕರ, ರೋಹಿತ ಚಿಕಲಕರ, ನಾಗೇಶ ಪಾಂಡುರಂಗ ದೇಸಾಯಿ, ನಿತೇಶ ನಾಗೇಶ ದೇಸಾಯಿ, ದೀಪಕ ನಾಗೇಶ ದೇಸಾಯಿ, ಪೊಪಟ ಪಾಂಡುರಂಗ ದೇಸಾಯಿ ಹಾಗೂ ಅಪ್ಪಾಜಿ ಪಾಂಡುರಂಗ ದೇಸಾಯಿ ವಿರುದ್ಧ ದೂರು ನೀಡಲಾಗಿದ್ದು, ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.